ವಕ್ಫ್ ಮಂಡಳಿ ಹಿಂದೂಗಳು ಮತ್ತು ರೈತರ ಆಸ್ತಿ ಕಬಳಿಕೆ ಮಾಡುತ್ತಿರುವ ಬಗ್ಗೆ ಸದನದಲ್ಲಿ ದಾಖಲೆ ಸಮೇತ ಮಾತನಾಡಿದ್ದೇನೆ. ಈ ಹೋರಾಟದಲ್ಲಿ ಬಿಜೆಪಿಗೆ ತಕ್ಕ ಮಟ್ಟಿನ ಜಯ ದೊರಕಿದೆ. ಸರ್ಕಾರ ಬಿಜೆಪಿಯ ಒತ್ತಡಕ್ಕೆ ಮಣಿದು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚನೆ ಮಾಡುವುದಾಗಿ ಘೋಷಿಸಿದೆ. ಬಾಣಂತಿಯರ ಸಾವಿನ ಪ್ರಕರಣಕ್ಕೂ ನ್ಯಾಯಾಂಗ ತನಿಖೆ ಘೋಷಿಸಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಅಧಿವೇಶನ ಹತ್ತು ದಿನ ನಿಗದಿಯಾಗಿತ್ತು. ಆದರೆ ಕನ್ನಡ ಸಾಹಿತ್ಯ ಸಮ್ಮೇಳನ ಇದೆ ಎಂದು ಅದನ್ನು 9 ದಿನಕ್ಕೆ ಇಳಿಕೆ ಮಾಡಲಾಯಿತು. ಬಸವಣ್ಣನವರ ವರ್ಣಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಒಂದು ದಿನ ಕಳೆಯಿತು. ಉಳಿದಿದ್ದು ಏಳು ದಿನ ಮಾತ್ರ. ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ನಿಧನದಿಂದ ಎರಡು ದಿನ ಸದನ ನಡೆಯಲಿಲ್ಲ. ಈ ಕಾರಣದಿಂದ ಬಿಜೆಪಿಗೆ ಕೇವಲ 5 ದಿನ ಮಾತ್ರ ಚರ್ಚೆಗೆ ಅವಕಾಶ ಸಿಕ್ಕಿತು. ಆದರೆ ಈ ಕಡಿಮೆ ಅವಧಿಯಲ್ಲೂ ಬಿಜೆಪಿ ವಕ್ಫ್ ಬೋರ್ಡ್, ಬಾಣಂತಿಯರ ಸಾವು, ಅನುದಾನ ತಾರತಮ್ಯ, ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಸೂಕ್ತ ಚರ್ಚೆ ನಡೆಸಿ ಸರ್ಕಾರವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು.ಇದಕ್ಕೆ ಸಹಕರಿಸಿದ ಎಲ್ಲ ಶಾಸಕರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಸದನದಲ್ಲಿ ಒಟ್ಟು ಎರಡು ಗಂಟೆಗಳ ಕಾಲ ನಾನು ವಕ್ಫ್ ಬೋರ್ಡ್ ವಿಚಾರವಾಗಿ ದಾಖಲೆ ಸಮೇತ ಮಾತನಾಡಿದ್ದೇನೆ. ಸರ್ಕಾರದ ಆದೇಶ, ಕೋರ್ಟ್ ಆದೇಶ, ಬ್ರಿಟಿಷರಿಂದ ಆರಂಭವಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಾಲದವರೆಗೂ ಯಾವ ರೀತಿ ಮುಸ್ಲಿಮರನ್ನು ವೋಟ್ ಬ್ಯಾಂಕ್ ಆಗಿ ಹಂತ ಹಂತವಾಗಿ ಬಳಕೆ ಮಾಡಲಾಗಿದೆ ಎಂದು ವಿವರಿಸಿದ್ದೇನೆ ಎಂದರು.
ಮುಸ್ಲಿಮರ ಆಸ್ತಿ ಕಬಳಿಕೆ ತಡೆಯಲು ಬ್ರಿಟಿಷರು ವಕ್ಫ್ ಬೋರ್ಡ್ ಸ್ಥಾಪಿಸಿದರು. ಆದರೆ ಕಾಂಗ್ರೆಸ್ನವರು ಮುಸ್ಲಿಮರಿಗೆ ಅನುಕೂಲವಾಗುವ ಕಾಯಿದೆ ತಂದರು. ಮುಸ್ಲಿಮರಿಗೆ ಹಿಂದೂಗಳಿಗಿಂತ ಎತ್ತರದ ಸ್ಥಾನ ನೀಡಿದರು. ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರು ವಕ್ಫ್ ಬೋರ್ಡ್ಗೆ ವಿಶೇಷ ಅಧಿಕಾರಗಳನ್ನು ಕೊಟ್ಟರು. ಮನಮೋಹನ್ ಸಿಂಗ್ ಅವರಂತೂ ಒನ್ಸ್ ವಕ್ಫ್ ಬೋರ್ಡ್ ಅಲ್ ವೇಸ್ ವಕ್ಫ್ ಬೋರ್ಡ್ ಎಂಬ ಕಾನೂನು ತಂದರು. ಇವರು ಈ ಕಾನೂನು ಮಾಡಿದ ಬಳಿಕ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಆಸ್ತಿ ವಕ್ಫ್ ಬೋರ್ಡ್ ಸೇರಿತು ಎಂದು ದೂರಿದರು.
ತಾರ್ಕಿಕ ಅಂತ್ಯ
ಕರ್ನಾಟಕದ ವಕ್ಫ್ ವೆಬ್ಸೈಟ್ನ ಪ್ರಕಾರ 1.11 ಲಕ್ಷ ಎಕರೆ ಜಮೀನು ವಕ್ಫ್ ಬೋರ್ಡ್ ಸ್ವಾಧೀನದಲ್ಲಿದೆ.
ಚಿಕ್ಕಬಳ್ಳಾಪುರದಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಓದಿದ ಶಾಲೆಯನ್ನು ವಕ್ಫ್ ಬೋರ್ಡ್ ಆಸ್ತಿಯಾಗಿ ಘೋಷಿಸಿ ಅಲ್ಲಿ ಮಸೀದಿ ನಿರ್ಮಿಸಿದ್ದಾರೆ.
ಬೀದರ್ನಲ್ಲಿ 560 ಎಕರೆ ಹಳ್ಳಿಯನ್ನು ವಕ್ಫ್ ಆಸ್ತಿಯಾಗಿ ಪರಿಗಣಿಸಲಾಗಿದೆ. ಇಷ್ಟೆಲ್ಲ ವಿಚಾರಗಳನ್ನು ಮಂಡಿಸಿದ ಬಳಿಕ ನಮ್ಮ ಹೋರಾಟಕ್ಕೆ ಮಣಿದ ಸರ್ಕಾರ, ನಿವೃತ್ತ ಜಡ್ಜ್ ನೇತೃತ್ವದಲ್ಲಿ ಸಮಿತಿ ರಚಿಸುತ್ತೇವೆ ಎಂದು ಭರವಸೆ ನೀಡಿದೆ. ಇದು ಬಿಜೆಪಿಯ ಹೋರಾಟಕ್ಕೆ ಸಂದ ಜಯ. ಈಗ ಸರ್ಕಾರ ನ್ಯಾಯಾಂಗ ತನಿಖೆಗೆ ನಿರ್ಧರಿಸಿದೆ. ಯಾವೆಲ್ಲಾ ರೈತರಿಗೆ ಅನ್ಯಾಯ ಆಗಿದೆ ಅವರು ಈಗ ಮನವಿ ಸಲ್ಲಿಸಬಹುದು. ಈ ಮೂಲಕ ವಕ್ಫ್ ಬೋರ್ಡ್ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿದ್ದೇವೆ ಎಂದು ತಿಳಿಸಿದರು.
ಬಾಣಂತಿಯರು ಹಾಗೂ ನವಜಾತ ಶಿಶುಗಳ ಸಾವಿಗೆ ಸಂಬಂಧಿಸಿದಂತೆ ಅಧಿವೇಶನದಲ್ಲಿ ಬಹಳಷ್ಟು ಚರ್ಚೆ ಮಾಡಿದ್ದೇವೆ. ಅವಧಿ ಮುಗಿದ ಔಷಧಿ ಬಗ್ಗೆಯೂ ದಾಖಲೆ ಕೊಟ್ಟಿದ್ದೇನೆ. ಆರೋಗ್ಯ ಸಚಿವರ ರಾಜೀನಾಮೆಗೂ ಸದನದಲ್ಲಿ ಆಗ್ರಹಿಸಿದ್ದೇವೆ. ಇದನ್ನು ನ್ಯಾಯಾಂಗ ತನಿಖೆಗೆ ವಹಿಸಲು ಸರ್ಕಾರ ಒಪ್ಪಿದೆ. ಇದು ಕೂಡ ವಿಧಾನಸಭೆಯ ಒಳಗೆ ಬಿಜೆಪಿಯ ಹೋರಾಟಕ್ಕೆ ಸಿಕ್ಕ ಜಯ ಎಂದು ತಿಳಿಸಿದರು.
ಉತ್ತರ ಕರ್ನಾಟಕಕ್ಕೆ ಅನುದಾನವಿಲ್ಲ
ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಬಿಜೆಪಿಯ 30 ಕ್ಕೂ ಹೆಚ್ಚು ಶಾಸಕರು ಮಾತನಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಸಂತೆ ಭಾಷಣ ಮಾಡುವುದನ್ನು ಬಿಡಬೇಕು. ಕಳೆದ ಅಧಿವೇಶನದಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ಮಾತನಾಡಿ ಉತ್ತರ ಕರ್ನಾಟಕಕ್ಕೆ ನಾನು ಏನೇನು ಕೊಡುತ್ತೇನೆ ಎಂದು ಘೋಷಿಸಿದ್ದರು. ಬೀದರ್, ಧಾರವಾಡ, ವಿಜಯಪುರ, ಕಲ್ಬುರ್ಗಿ ಹೀಗೆ ಎಲ್ಲಾ ಜಿಲ್ಲೆಗೆ ಒಂದೊಂದು ಕೈಗಾರಿಕೆಯನ್ನು ತರುತ್ತೇನೆ ಎಂದಿದ್ದರು. ನಂಜುಡಪ್ಪ ವರದಿಯಂತೆ ಸಮಿತಿ ನೇಮಕ ಮಾಡುತ್ತೇನೆ, ಆರು ತಿಂಗಳಲ್ಲಿ ವರದಿ ನೀಡುತ್ತೇನೆ ಎಂದಿದ್ದರು. ಆದರೆ ವರ್ಷ ಕಳೆದರೂ ಇನ್ನೂ ವರದಿ ಬರಲಿಲ್ಲ. ಪ್ರವಾಸೋದ್ಯಮಕ್ಕೆ ಹಣ ಕೊಡುತ್ತೇನೆ ಎಂದು ಹೇಳಿ ಅದನ್ನೂ ಮಾಡಲಿಲ್ಲ. ಕಳೆದ ಬಾರಿ ಹೇಳಿದ್ದನ್ನೇ ಮಾಡದ ಮುಖ್ಯಮಂತ್ರಿ, ಈಗ ಮತ್ತೆ ಘೋಷಣೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಪೀಕರ್ ಯು.ಟಿ.ಖಾದರ್ ಅವರು ಅಧಿವೇಶನವನ್ನು ಇನ್ನಷ್ಟು ಚೆನ್ನಾಗಿ ನಡೆಸಬಹುದಿತ್ತು. ಆದರೆ ಅವರಿನ್ನೂ ಕಾಂಗ್ರೆಸ್ ಮನಸ್ಥಿತಿಯಲ್ಲೇ ಇದ್ದಾರೆ. ಅವರು ಆಡಳಿತ ಪಕ್ಷದ ಪರವಾಗಿಯೇ ಹೆಚ್ಚು ಚಟುವಟಿಕೆ ನಡೆಸುತ್ತಿದ್ದಾರೆ. ಸ್ಪೀಕರ್ ಯಾವುದೇ ಪಕ್ಷಕ್ಕೆ ಸೀಮಿತವಾಗಬಾರದು. ಅವರು ಆಡಳಿತ ಪಕ್ಷದ ಕಡೆ ನೋಡುವ ಬದಲಾಗಿ, ವಿಪಕ್ಷಕ್ಕೆ ಹೆಚ್ಚಿನ ಅವಕಾಶ ಕೊಟ್ಟರೆ ಜನರಿಗೆ ನ್ಯಾಯ ಕೊಡಿಸಬಹುದು. ಇನ್ನು ಮುಂದೆಯಾದರೂ ಸ್ಪೀಕರ್ ಪಕ್ಷಪಾತವಿಲ್ಲದೆ ಕೆಲಸ ಮಾಡಲಿ ಎಂದು ಅಶೋಕ್ ಸಲಹೆ ನೀಡಿದರು.