‘ನವೋದಯ ಕಾವ್ಯಚೈತ್ರ’ ಕನ್ನಡದ ಮೂರನೆಯ ರಾಷ್ಟ್ರಕವಿ ಡಾ ಜಿ ಎಸ್ ಶಿವರುದ್ರಪ್ಪ: Marjala manthana Dr G S Shivarudrappa
ನವೋದಯ ಸಾಹಿತ್ಯದಲ್ಲಿ ಸಾಮಗಾನ ಹಾಡಿದ ಕವಿ ಇವರು, ಸರಳವಾದ ಪದಪುಂಜಗಳ ಕಟ್ಟಿ ಪದ್ಯ ಬರೆದು ಕನ್ನಡದ ಮನೆಮನೆಗಳ ತಲುಪಿದ ಸಾಹಿತ್ಯಜೀವಿ. ವಿಶ್ವಕವಿ ಕುವೆಂಪು ಅವರ ಅಚ್ಚುಮೆಚ್ಚಿನ ಶಿಷ್ಯರಾಗಿದ್ದ ಈ ರಾಷ್ಟ್ರಕವಿ ನಮ್ಮ ನಾಡಿನ ಅಪರೂಪದ ಕಾವ್ಯರತ್ನ ನಾಡೋಜ ಜಿಎಸ್ ಶಿವರುದ್ರಪ್ಪ. ಇಂದು ನಮ್ಮ ನಾಡಿನ ಹೆಮ್ಮೆಯ ರಾಷ್ಟ್ರಕವಿ ಜಿಎಸ್ಎಸ್ ಅವರ 95ನೇ ಜನ್ಮಜಯಂತಿ. Marjala manthana Dr G S Shivarudrappa
ಡಾ. ಜಿ.ಎಸ್ ಶಿವರುದ್ರಪ್ಪ ಅವರನ್ನು ನವೋದಯ ಸಾಹಿತ್ಯದ ಖ್ಯಾತ ಸಾಹಿತಿ ಅಂತಷ್ಟೆ ಹೇಳಿದ್ರೆ ಸಾಲೋದಿಲ್ಲ. ಅವರು ಹೊಸಗನ್ನಡ ಶೈಲಿಯ ಪ್ರಮುಖ ಕವಿ, ಸೂಕ್ಷ್ಮ ದೃಷ್ಟಿಕೋನ ಹೊಂದಿದ್ದ ವಿಮರ್ಶಕ, ಸಂಶೋಧಕ, ನಾಟಕಕಾರ, ಅತ್ಯುತ್ತಮ ಪ್ರಾಧ್ಯಾಪಕ, ಸಮರ್ಥ ಆಡಳಿತಗಾರ, ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಅವರ ಮೆಚ್ಚಿನ ಶಿಷ್ಯ. ಕುವೆಂಪು, ಗೋವಿಂದ ಪೈ ನಂತರ ಮೂರನೆಯ ರಾಷ್ಟ್ರಕವಿಯಾಗಿ ಕನ್ನಡದ ಪರ ಧ್ವನಿ ಎತ್ತಿದ ನಿಷ್ಟಾವಂತ ಕನ್ನಡಿಗ.
ಹಿರಿಯರಲ್ಲಿ ಕಿರಿಯರಲ್ಲಿ, ಹಳಬರಲ್ಲಿ ಹೊಸಬರಲ್ಲಿ, ನವ ಚೇತನದುತ್ಸಾಹದ, ಚಿಲುಮೆ ಚಿಮ್ಮುವೆದೆಗಳಲ್ಲಿ; ಶುಭೋದಯವ ತೆರೆದಿದೆ ಎಂದು ಹಾರೈಸಿದ ಶಿವರುದ್ರಪ್ಪ ಹೊಸ ಬೆಳಕು ಹೊಸ ಬದುಕು ಹೊಸತನವನ್ನು ಸದಾ ಸ್ವಾಗತಿಸುತ್ತಿದ್ದ, ಜೀವನಾನುಭವ ಮಾಗಿದ ಪರಿಪಕ್ವ ಕವಿ.
ರಾಷ್ಟ್ರಕವಿ ಕುವೆಂಪು ಅವರ ಶಿಷ್ಯತ್ವ ಹಾಗೂ ಸಾಂಗತ್ಯ ಜಿಎಸ್ ಶಿವರುದ್ರಪ್ಪನವರಲ್ಲೂ ಸಾಹಿತ್ಯ ಹಾಗೂ ಸಾಮಾಜಿಕ ಔನ್ನತ್ಯ ಉದಾಯ ವಿಚಾರಗಳತ್ತ ಆಕರ್ಷಿತರಾಗುವಂತೆ ಮಾಡಿತ್ತು. ಹೀಗಾಗಿ ಜಿಎಸ್ಎಸ್ ಕೊನೆಯವರೆಗೂ ಯಾವುದೇ ನಿರ್ದಿಷ್ಟ ಜಾತಿ, ಧರ್ಮ, ಪಕ್ಷ, ಪಂಥಗಳಿಗೆ ಸೇರದೆ ವಿಶ್ವಮಾನವರಂತೆ ಬದುಕಿದ್ದರು. ಯಾವುದೇ ವಿವಾದಕ್ಕೆ ಗುರಿಯಾಗದೆ ಸರಳವಾಗಿ, ಅರ್ಥಗರ್ಭಿತವಾಗಿ ಮನಸಿಗೆ ತಾಗುವಂತೆ ಕವನ ಬರೆದು ಕಾವ್ಯಪ್ರಿಯರಿಗೆ ಆತ್ಮೀಯರಾಗಿದ್ದ ಕವಿ ಡಾ.ಜಿಎಸ್ ಶಿವರುದ್ರಪ್ಪ.
ಕನ್ನಡದ ಭಾವಗೀತೆಗಳ ಪರೆಂಪರೆಗೆ ಹೊಸ ಆಯಾಮ ಕೊಟ್ಟವರು ಕವಿ ಜಿಎಸ್ಎಸ್. ನವ್ಯದ ಅರ್ಥವಾಗದ ಕ್ಲಿಷ್ಟ ಸಾಹಿತ್ಯದ ಸಂಕಟದಲ್ಲಿದ್ದ ಸಾಹಿತ್ಯಾಸಕ್ತರಿಗೆ ಸರಳವಾಗಿ ಅರ್ಥವಾಗುವ ಮಧುರ ಭಾವಗೀತೆಗಳ ಉಡುಗೊರೆ ಕೊಟ್ಟವರು ಜಿಎಸ್ಎಸ್.
‘ಉಡುಗಣ ವೇಷ್ಟಿತ ಚಂದ್ರ ಸುಶೋಭಿತ’, ‘ಎದೆ ತುಂಬಿ ಹಾಡಿದೆನು’, ‘ಹಾಡು ಹಳೆಯದಾದರೇನು ಭಾವ ನವನವೀನ’, ‘ಎಲ್ಲೋ ಹುಡುಕಿದೆ ಇಲ್ಲದ ದೇವರ’, ‘ವೇದಾಂತಿ ಹೇಳಿದನು’ ‘ನೀನು ಮುಗಿಲು ನಾನು ನೆಲ’, ‘ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ’, ‘ಕಾಣದ ಕಡಲಿಗೆ ಹಂಬಲಿಸಿದೆ ಮನ’, `ಪ್ರೀತಿ ಇಲ್ಲದ ಮೇಲೆ’ ಹೇಳುತ್ತಾ ಹೋದರೆ ಜಿಎಸ್ಎಸ್ರವರ ಬಹುತೇಕ ಭಾವಗೀತೆಗಳು ಕಾವ್ಯಪ್ರಿಯರ ನಾಲಿಗೆಯಲ್ಲಿ ನಲಿದಾಡುತ್ತವೆ.
ಕನ್ನಡದ ಮೂರನೆಯ ರಾಷ್ಟ್ರಕವಿ ಜಿ.ಎಸ್ ಶಿವರುದ್ರಪ್ಪ ಜನಿಸಿದ್ದು ಫೆಬ್ರುವರಿ 7, 1926ರಲ್ಲಿ. ಜಿಎಸ್ಎಸ್ ಹುಟ್ಟಿದ್ದು ಮಲೆನಾಡು ಹಾಗೂ ಅರೆ ಮಲೆನಾಡು ಸೀಮೆಯ ಗಡಿ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದಲ್ಲಿ. ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು ಶಾಂತವೀರಪ್ಪ ಹಾಗೂ ವೀರಮ್ಮ ದಂಪತಿಯ ಮಗನಾಗಿ ಹುಟ್ಟಿದ ಶಿವರುದ್ರಪ್ಪನವರದ್ದು ಸಾಧಾರಣ ಬಡ ಕುಟುಂಬ. ಆದರೆ ಮನೆಯಲ್ಲಿ ಶೈಕ್ಷಣಿಕ ಹಾಗೂ ಸಾಹಿತ್ಯಕ ವಾತಾವರಣವಿತ್ತು.
ಹೊನ್ನಾಳಿ, ಕೋಟೆಹಾಳಗಳಲ್ಲಿ ಪ್ರಾಥಮಿಕ ಶಿಕ್ಷಣ, ರಾಮಗಿರಿ, ಬೆಲಗೂರುಗಳಲ್ಲಿ ಮಾಧ್ಯಮಿಕ ಶಿಕ್ಷಣ, ದಾವಣಗೆರೆ, ತುಮಕೂರುಗಳಲ್ಲಿ ಪ್ರೌಢಶಾಲಾ ಹಾಗೂ ಇಂಟರ್ ಮೀಡಿಯಟ್ ಶಿಕ್ಷಣವನ್ನೂ ಮುಗಿಸಿದರು. ಮನೆಯ ಆರ್ಥಿಕ ಪರಿಸ್ಥಿತಿಯ ಕಾರಣ ಎಸ್.ಎಸ್.ಎಲ್.ಸಿ ಮುಗಿದ ನಂತರ ಬಡತನದಿಂದಾಗಿ ಗುಬ್ಬಿ ತಾಲ್ಲೂಕು ಕಚೇರಿಯಲ್ಲಿ ಗುಮಾಸ್ತರಾಗಿ ನೌಕರಿ ಹಿಡಿದು ದುಡಿಯಲು ಶುರು ಮಾಡಿದ್ದರು ಜಿಎಸ್ಎಸ್. ಆದರೆ ಓದಲೇಬೇಕೆಂಬ ಅದಮ್ಯ ಬಯಕೆ, ಮೈಸೂರು ಮಹಾರಾಜ ಕಾಲೇಜಿನಲ್ಲಿ ಅವರ ಓದು ಮುಂದುವರೆಸಿತು.1949ರಲ್ಲಿ ಬಿ.ಎ. ಪದವಿ, 1953ರಲ್ಲಿ ಸ್ವರ್ಣಪದಕದೊಂದಿಗೆ ಎಂ.ಎ. ಪದವಿ ಪಡೆದರು. ಮೈಸೂರಿನ ಯುವರಾಜ ಕಾಲೇಜು, ಮಹಾರಾಜ ಕಾಲೇಜು, ಮಾನಸ ಗಂಗೋತ್ರಿಯಲ್ಲಿ ಅಧ್ಯಾಪಕರಾಗಿ ಕೆಲ ಕಾಲ ಸೇವೆ ಸಲ್ಲಿಸಿ, ನಂತರ ಹೈದರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ದುಡಿದರು. ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ನಿರ್ದೇಶಕರಾಗಿಯೂ ಜಿಎಸ್ಎಸ್ ಕೆಲಸ ಮಾಡಿದ್ದರು.
ಯಾವುದೋ ಪ್ರವಾಹ ನಮ್ಮ ಸಮಾಜದ ಕೊಳೆಯನ್ನು ತೊಳೆಯುತ್ತದೆ ಅನ್ನುವ ನಿರೀಕ್ಷೆ ಅವರ ಕಾವ್ಯದಲ್ಲಿ ಗೋಚರವಾಗಿದೆ. ಗುಡಿ ಗೋಪುರ ಉರುಳುತಿವೆ; ಹಳೆಯ ಪ್ರತಿಮೆಗಳು ತೇಲುತಿವೆ. ದೀಪವಾರಿ, ತಂತಿ ಹರಿದು; ವಾದ್ಯವೃಂದ ನರಳುತಿದೆ. ಎದೆ ಎದೆಗಳ ನಡುವೆ ಇರುವ ಸೇತುವೆಗಳು ಮುರಿದಿವೆ; ಭಯ-ಸಂಶಯ- ತಲ್ಲಣಗಳ, ಕಂದರಗಳು ತೆರೆದಿವೆ ಎಂದು ಬರೆದ ಶಿವರುದ್ರಪ್ಪನವರು ತಮ್ಮೊಳಗೆ ಸುಪ್ತವಾಗಿರುವ ಯಾವುದೋ ಅವ್ಯಕ್ತ ತುಮುಲುವನ್ನು ವ್ಯಕ್ತಪಡಿಸುವ ಪ್ರಯತ್ನ ಮಾಡಿದ್ದಾರೆ. ಮುಖ ಮುಖವೂ ಮುಖವಾಡವ ತೊಟ್ಟು ನಿಂತ ಹಾಗಿದೆ; ಆಡುತಿರುವ ಮಾತಿನೊಳಗೆ ಹೃದಯ ಕಾಣದಾಗಿದೆ ಅನ್ನುವ ಸಾಲುಗಳು ಮನುಷ್ಯನ ಕೃತ್ರಿಮ ಸ್ವಭಾವವನ್ನು ಪ್ರಕಟಿಸುವಂತಿದೆ. ಹಮ್ಮು ಬಿಮ್ಮು ಒಂದೂ ಇಲ್ಲ ಹಾಡು ಹೃದಯ ತೆರೆದಿದೆ; ಹಾಡಿನಲ್ಲಿ ಲೀನವಾಗಲೆನ್ನ ಮನವು ಕಾದಿದೆ ಅಂತ ಬರೆದ ಶಿವರುದ್ರಪ್ಪ ತಮ್ಮೊಳಗಿನ ಕವಿಯ ಆತ್ಮವನ್ನೇ ವಿಮರ್ಷಿಸಿಕೊಂಡಿದ್ದಾರೆ.
ಸಾವಿರ ಹೊಳೆಗಳು ತುಂಬಿ ಹರಿದರೂ ಒಂದೇ ಸಮನಾಗಿಹುದಂತೆ; ಸುನಿಲ ವಿಸ್ತರ ತರಂಗ ಶೋಭಿತ ಗಂಭೀರಾಂಬುಧಿ ತಾನಂತೆ ಅನ್ನುವ ಸಾಲುಗಳಲ್ಲಿ, ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ ತೊರೆಯು ನಾನು; ಎಂದಿಗಾದರೂ ಕಾಣದ ಕಡಲಿಗೆ ಸೇರಬಲ್ಲೆ ನೀನು ಎನ್ನುವ ಸಾಲುಗಳಲ್ಲಿ ಶಿವರುದ್ರಪ್ಪನವರ ನಿಷ್ಕಲ್ಮಶ ಹಂಬಲ ಹಾಗೂ ಬದುಕಿನ ಮಹೋನ್ನತ ಗುರಿಯತ್ತ ಸಾಗುವ ಬಯಕ್ಕೆ ನಿಚ್ಚಳವಾಗಿ ಕಾಣಿಸುತ್ತದೆ. ನಾನು ಎಳೆವೆ, ನೀನು ಮಣಿವೆ, ನಾನು ಕರೆವೆ, ನೀನು ಸುರಿವೆ; ನಮ್ಮಿಬ್ಬರ ಒಲುಮೆ ನಲುಮೆ ಜಗಕಾಯಿತು ಹುಣ್ಣಿಮೆ ಅನ್ನುವ ಕವಿ ಶಿವರುದ್ರಪ್ಪ ಪ್ರೀತಿಯ ಸಾಮಗಾನದ ಸಂಭ್ರಮವನ್ನು ಬಣ್ಣಿಸಿದ್ದಾರೆ. ಸೂರ್ಯ ಚಂದ್ರ ಚಿಕ್ಕೆಗಣ್ಣ, ತೆರೆದು ನೀನು ಸುರಿವ ಬಣ್ಣ; ಹಸಿರಾಯಿತು ಹೂವಾಯಿತು ಚೆಲುವಾಯಿತು ಈ ನೆಲ ಎಂದು ಒಲವಿನ ತನ್ಮಯತೆಯಲ್ಲಿ ಕನಸು ಕಂಡ ಕವಿ ಡಾ. ಜಿ.ಎಸ್.ಶಿವರುದ್ರಪ್ಪ.
ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ; ಎಷ್ಟು ಕಷ್ಟವೋ ಹೊಂದಿಕೆಯೆಂಬುದು ನಾಲ್ಕುದಿನದ ಈ ಬದುಕಿನಲಿ ಅಂತ ಬರೆಯುವ ಮೂಲಕ ನಮ್ಮೆಲ್ಲರೊಳಗಿನ ಅಹಂಕಾರದ ಕರಾಳತೆಯನ್ನು ತೆರೆದಿಟ್ಟಿದ್ದಾರೆ ಜಿಎಸ್ಎಸ್. ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ, ಹಾಡುವುದು ಅನಿವಾರ್ಯ ಕರ್ಮ ನನಗೆ; ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ ಎಂದು ಪದ್ಯ ಬರೆದ ಜಿಎಸ್ಎಸ್ ತಮ್ಮತನ, ತಮ್ಮ ಕಾವ್ಯ ಹಾಗೂ ತಮ್ಮ ಒಳತೋಟಿಯ ಬಗ್ಗೆ ತಮಗಿರುವ ಅಭಿಮಾನವನ್ನು ತೋರ್ಪಡಿಸಿದ್ದಾರೆ.
ಎಲ್ಲದಕ್ಕಿಂತ ಅತ್ಯುತ್ತಮ ಭಾವ ಅನಾವರಣಗೊಂಡಿರುವುದು ಜಿಎಸ್ಎಸ್ ಅವರ ಸ್ತ್ರೀ ಎಂದರೆ ಅಷ್ಟೇ ಸಾಕೆ ಕವನದಲ್ಲಿ. ಹಸುರನುಟ್ಟ ಬೆಟ್ಟಗಳಲಿ ಮೊಲೆಹಾಲಿನ ಹೊಳೆಯನಿಳಿಸಿ; ಬಯಲ ಹಸಿರ ನಗಿಸಿದಾಕೆ ನಿನಗೆ ಬೇರೆ ಹೆಸರು ಬೇಕೇ; ಸ್ತ್ರೀ ಎಂದರೆ ಅಷ್ಟೇ ಸಾಕೆ ಅನ್ನುವ ಸಾಲುಗಳು ಜಗತ್ತಿನ ಮೂಲಶಕ್ತಿ ಸೃಷ್ಟಿ ರೂಪಿಣಿ ಸ್ತ್ರೀಯನ್ನು ಪ್ರಕೃತಿಗೆ ಹೋಲಿಸಿದ ವಿಶಾಲದೃಷ್ಟಿಕೋನ ಇದರಲ್ಲಿದೆ.
ಸಾಮಾಗಾನ, ಚೆಲುವು-ಒಲವು, ದೇವಶಿಲ್ಪ, ದೀಪದ ಹೆಜ್ಜೆ, ಅನಾವರಣ, ತೆರೆದ ದಾರಿ, ಗೋಡೆ, ವ್ಯಕ್ತ ಮಧ್ಯ ಓರೆ ಅಕ್ಷರಗಳು, ತೀರ್ಥವಾಣಿ, ಕಾರ್ತಿಕ, ಕಾಡಿನ ಕತ್ತಲಲ್ಲಿ, ಚಕ್ರಗತಿ, ಎದೆ ತುಂಬಿ ಹಾಡುವೆನು ಮುಂತಾದವು ಜಿಎಸ್ಎಸ್ ಅವರ ಕವನ ಸಂಕಲನಗಳು. ಸೌಂದರ್ಯ ಸಮೀಕ್ಷೆ ಪಿಹೆಚ್ಡಿ ಮಹಾ ಪ್ರಬಂಧ. ಪರಿಶೀಲನ, ವಿಮರ್ಶೆಯ ಪೂರ್ವ ಪಶ್ಚಿಮ, ಕಾವ್ಯಾರ್ಥ ಚಿಂತನ, ಗತಿಬಿಂಬ, ಅನುರಣನ, ಪ್ರತಿಕ್ರಿಯೆ, ಕನ್ನಡ ಸಾಹಿತ್ಯ ಸಮೀಕ್ಷೆ, ಮಹಾಕಾವ್ಯ ಸ್ವರೂಪ, ಕನ್ನಡ ಕವಿಗಳ ಕಾವ್ಯ ಕಲ್ಪನೆ, ಹೊಸಗನ್ನಡ ಕವಿತೆಗಳಲ್ಲಿ ಕಾವ್ಯ ಚಿಂತನ, ಕುವೆಂಪು: ಪುನರವಲೋಕನ, ಸಮಗ್ರ ಗದ್ಯ ಭಾಗ, ಬೆಡಗು, ನವೋದಯ, ಸೌಂದರ್ಯ ತಿಬಿಂಬ, ಕನ್ನಡ ಕವಿಗಳ ಕಾವ್ಯ ಕಲ್ಪನೆ ಇತ್ಯಾದಿ ಶಿವರುದ್ರಪ್ಪನವರ ವಿಮರ್ಷಾ ಕೃತಿಗಳು. ಮಾಸ್ಕೋದಲ್ಲಿ 22 ದಿನ, ಇಂಗ್ಲೆಂಡಿನಲ್ಲಿ ಚತುರ್ಮಾಸ, ಅಮೆರಿಕದಲ್ಲಿ ಕನ್ನಡಿಗ, ಗಂಗೆಯ ಶಿಖರಗಳಲ್ಲಿ ಮುಂತಾದ ಪ್ರವಾಸ ಕಥನಗಳ ಜೊತೆ ಕರ್ಮಯೋಗಿ ಅನ್ನುವ ಸಿದ್ದರಾಮನ ಜೀವನ ಚರಿತ್ರೆಯನ್ನೂ ಜಿಎಸ್ಎಸ್ ಬರೆದಿದ್ದಾರೆ. ರಾಜ್ಯ ಸರ್ಕಾರಕ್ಕಾಗಿ “Kuvempu-a Reappraisal” ಅನ್ನುವ ಗ್ರಂಥ ಶಿವರುದ್ರಪ್ಪನವರ ಲೇಖನಿಯಿಂದ ಹೊರಬಂದಿದೆ.
ಹಸ್ತಪ್ರತಿಗಳ ಸಂಗ್ರಹಣೆ ಹಾಗೂ ರಕ್ಷಣೆಗಳ ಬಗ್ಗೆ ಜಿಎಸ್ಎಸ್ ಅವರಿಗೆ ವಿಶೇಷ ಕಾಳಜಿಯಿತ್ತು. 1971ರಲ್ಲಿ ಕನ್ನಡ ಅಧ್ಯಯನ ಕೇಂದ್ರದಲ್ಲಿ ‘ಹಸ್ತಪ್ರತಿ ವಿಭಾಗ’ ವನ್ನು ಪ್ರಾರಂಭಿಸಿದವರೆ ಡಾ. ಜಿಎಸ್ ಶಿವರುದ್ರಪ್ಪ. ಕೇವಲ 4 ವರ್ಷಗಳಲ್ಲಿ 3000ಕ್ಕೂ ಹೆಚ್ಚು ಓಲೆಗರಿಗಳು ಹಾಗೂ 1000ಕ್ಕೂ ಹೆಚ್ಚು ಕಾಗದದ ಹಸ್ತ ಪ್ರತಿಗಳನ್ನು ಇಲ್ಲಿ ಸಂಗ್ರಹಿಸಲಾಯಿತು. ನಿವೃತ್ತಿ ನಂತರವೂ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಕುವೆಂಪು ಪೀಠದ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಶಿವರುದ್ರಪ್ಪನವರು ಗಣನೀಯ ಸೇವೆ ಸಲ್ಲಿಸಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ರಾಜ್ಯ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ, ದೆಹಲಿಯ ರಾಷ್ಟ್ರೀಯ ಕವಿ ಸಮ್ಮೇಳನ, ತುಮಕೂರಿನ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷರಾಗಿ, ಮದರಾಸಿನ ಕನ್ನಡ ಸಮ್ಮೇಳನದ ಅಧ್ಯಕ್ಷರಾಗಿ, 1992ರ ದಾವಣಗೆರೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಜಿಎಸ್ಎಸ್ ಕನ್ನಡ ಸಾಹಿತ್ಯ ಕ್ಷೇತ್ರದ ಧ್ರುವ ನಕ್ಷತ್ರದಂತೆ ಹೊಳೆದಿದ್ದಾರೆ.
ನಾಡೋಜ ಜಿ.ಎಸ್.ಶಿವರುದ್ರಪ್ಪನವರ ಸಾಹಿತ್ಯ ಕೃಷಿಗೆ ಅರಸಿ ಬಂದ ಪ್ರಶಸ್ತಿ ಫಲಕಗಳು, ಬಿರುದು ಬಾವಲಿಗಳ ಪಟ್ಟಿ ದೊಡ್ಡದಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿ, ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ, ಪಂಪ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಅನಕೃ ಪ್ರತಿಷ್ಠಾನ ಪ್ರಶಸ್ತಿ, ಪ್ರೋ ಭೂಸನೂರ ಮಠ ಪ್ರಶಸ್ತಿ, ಗೊರೂರು ಪ್ರಶಸ್ತಿ, ಹಂಪಿ ಕನ್ನಡ ವಿ.ವಿಯಿಂದ ನಾಡೋಜ ಗೌರವ ಡಾಕ್ಟರೇಟ್, ಮೈಸೂರು ವಿ.ವಿಯಿಂದ ಗೌರವ ಡಿ.ಲಿಟ್, ರಾಷ್ಟ್ರಕವಿ ಪುರಸ್ಕಾರ, ಕುವೆಂಪು ವಿ.ವಿಯಿಂದ ಗೌರವ ಡಿ.ಲಿಟ್. ಬೆಂಗಳೂರು ವಿ.ವಿಯಿಂದ ಗೌರವ ಡಿ.ಲಿಟ್, ಕುವೆತ್ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷತೆ, ನೃಪತುಂಗ ಪ್ರಶಸ್ತಿಗಳು ರಾಷ್ಟ್ರಕವಿಯ ಮನೆ ಬಾಗಿಲು ತಟ್ಟಿವೆ. ನವೆಂಬರ್ 1, 2006ರ ಸುವರ್ಣ ಕರ್ನಾಟಕ ರಾಜ್ಯೋತ್ಸವದಂದು ಶಿವರುದ್ರಪ್ಪನವರನ್ನು ರಾಷ್ಟ್ರಕವಿ ಎಂದು ಘೋಷಿಸಲಾಯಿತು.
ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ರಾಯಬಾರಿಯಂತಿದ್ದ ರಾಷ್ಟ್ರಕವಿ ಡಾ ಜಿ.ಎಸ್. ಶಿವರುದ್ರಪ್ಪ ತಮ್ಮ 87ನೆಯ ವಯಸ್ಸಿನಲ್ಲಿ ಇಹದ ವ್ಯವಹಾರ ಮುಕ್ತಾಯಗೊಳಿಸಿ ನಡೆದ್ರು. ಹಲವು ಕಾಲಗಳ ಮೂತ್ರಪಿಂಡದ ಸಮಸ್ಯೆ ಮತ್ತು ಉಸಿರಾಟದ ತೊಂದರೆಯ ಕಾರಣ ಕೊನೆಯ ಎರಡು ತಿಂಗಳು ಪ್ರಜ್ಞಾಶೂನ್ಯ ಸ್ಥಿತಿಯಲ್ಲಿದ್ದರು. ಬನಶಂಕರಿ 2ನೇ ಹಂತದ ಸ್ವಗೃಹ ‘ಚೈತ್ರ’ದಲ್ಲಿ ರಾಷ್ಟ್ರಕವಿ ಚಿರನಿದ್ರೆಗೆ ಜಾರಿದರು. ಇಂದು ಮಹಾಚೇತನ ಜಿಎಸ್ ಶಿವರುದ್ರಪ್ಪನವರ ಜನ್ಮಜಯಂತಿ.
ನವೋದಯದ ಕಾವ್ಯ ಪ್ರಕಾರದಲ್ಲಿ ವಿಶೇಷ ಹೆಸರು ಮಾಡಿದ, ಭಾವಗೀತೆಗಳ ಮೂಲಕ ಕಾವ್ಯಪ್ರಿಯರ ಹೃದಯಕ್ಕೆ ಆಪ್ತರಾದ, ಕನ್ನಡದ ಮೂರನೆಯ ರಾಷ್ಟ್ರಕವಿ ಅನ್ನುವ ಹೆಗ್ಗಳಿಕೆ ಹೊಂದಿದ್ದ ಡಾ. ಜಿಎಸ್ ಶಿವರುದ್ರಪ್ಪ ಭೌತಿಕವಾಗಿ ಮರೆಯಾದರೂ ಭಾವಗೀತೆಗಳ ನವಿರು ಸಾಹಿತ್ಯದ ಮೂಲಕ ಸದಾ ಜೀವಂತವಿರುತ್ತಾರೆ, ಪ್ರಸ್ತುತರಾಗಿ ಉಳಿಯುತ್ತಾರೆ. Marjala manthana Dr G S Shivarudrappa
–ವಿಭಾ (ವಿಶ್ವಾಸ್ ಭಾರದ್ವಾಜ್)
***
ಸಾಕ್ಷಾಟಿವಿ ಸುದ್ದಿ ಸಂಪಾದಕ ವಿಶ್ವಾಸ್ ಭಾರದ್ವಾಜ್ ಅವರ ಕಿರು ಪರಿಚಯ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel