ಕಡು ಕಹಿಯಾದರೂ ಔಷದೀಯವಾಗಿ ಬಹು ಉಪಯೋಗಕಾರಿ ಈ ವಿಷಮಧಾರಿ ಸಸ್ಯ:
ಮೊದಲೆಲ್ಲಾ ಎಲ್ಲೆಂದರಲ್ಲಿ ಹೇರಳವಾಗಿ ಸಿಗುತ್ತಿದ್ದ ವಿಷಮಧಾರಿ ಸಸ್ಯ ಈಗ ಕೇವಲ ಉದ್ಯಾನವನ ಮತ್ತು ಮನೆಮುಂದಿನ ಅಲಂಕಾರಿಕ ಗಿಡವಾಗಿ ಮಾತ್ರ ಉಪಯೋಗವಾಗುತ್ತಿದೆ. ಸಂಸ್ಕೃತದಲ್ಲಿ ಕುಂಡಲಿವನಜಯಿ ಎಂದು ಕರೆಯುವ ಈ ಸಸ್ಯಕ್ಕೆ ಕನ್ನಡದಲ್ಲಿ ನಾನಾ ಹೆಸರುಗಳಿವೆ. ವಿಶಂಧರಿ, ಹೊಳೆಮದರಂಗಿ, ನಾಯಿತಕ್ಕಲಿ, ಕುಂಡಲಿ, ವಾಸನೇಗಿಡ ಮುಂತಾದ ಹೆಸರುಗಳಿವೆ. ಭಾರತ ಹಾಗೂ ಆಸ್ಟ್ರೇಲಿಯಾಗಳಲ್ಲಿ ಕಂಡುಬರುವ ಈ ಗಿಡ ಕುರುಚಲು ಕಾಡು ಹಾಗೂ ಬಂಜರುಭೂಮಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಸುಮಾರು 3 ರಿಂದ 6 ಅಡಿ ಎತ್ತರಕ್ಕೆ ಬೆಳೆಯಬಲ್ಲ ಪೊದೆ ಸಸ್ಯ ವಿಷಮಧಾರಿ. ಈ ಗಿಡದ ಎಲೆಗಳು ಅತ್ಯಂತ ಕಹಿರುಚಿ ಇರುತ್ತದೆ. ಇದರಲ್ಲಿ ಬಿಳಿಬಣ್ಣದ ಸುಂದರವಾದ ಹೂವುಗಳಾಗುತ್ತವ. ಈ ಸಸ್ಯ ಹಲವಾರು ವಿಧದ ರಾಸಾಯನಿಕ ಸಂಯೋಜನೆಗಳಿಂದ ಕೂಡಿರುತ್ತದೆ. ಆಯುರ್ವೇದ ಹಾಗೂ ಸಿದ್ಧವೈದ್ಯ ಪದ್ಧತಿಗಳಲ್ಲಿ ಈ ಸಸ್ಯದ ಎಲೆ ಹಾಗೂ ಬೇರುಗಳನ್ನು ಔಷದೋದ್ದೇಶಕ್ಕೆ ಬಳಸಲಾಗುತ್ತದೆ.
ಜ್ವರ, ಚರ್ಮರೋಗ, ಗುಪ್ತರೋಗಗಳು, ಅಸ್ತಮಾ ಸಮಸ್ಯೆಗಳ ಪರಿಹಾರಕ್ಕೆ ಈ ಸಸ್ಯ ಬಳಕೆಗೆ ಬರುತ್ತದೆ. ಇದರ ಪ್ರಮುಖ ಉಪಯೋಗವೆಂದರೆ, ಚೇಳು ಕುಟುಕಿದಾಗ ಇದರ ಬೇರನ್ನು ಅರೆದು ಚೇಳು ಕಚ್ಚಿದ ಜಾಗದಲ್ಲಿ ಹಚ್ಚುವುದರಿಂದ ವಿಷ ಕಡಿಮೆಯಾಗಿ ನೋವು ಶಮನವಾಗುತ್ತದೆ. ಚರ್ಮದ ಸಮಸ್ಯೆಗಳಿಗೂ ಇದನ್ನು ಔಷಧವಾಗಿ ಬಳಸಲಾಗುತ್ತದೆ. ಪ್ರತಿದಿನ ಈ ಗಿಡದ 4 ರಿಂದ 5 ಎಲೆಗಳನ್ನು ಸೇವಿಸುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಆದರೆ ಕರುಳು ಮತ್ತು ಜಠರದ ತೊಂದರೆಯಿಂದ ಬಳಲುತ್ತಿರುವವರು ಇದರಿಂದ ದೂರವಿರಬೇಕು. ಮಕ್ಕಳು ಹಾಗೂ ಗರ್ಭಿಣಿಯರು ಇದನ್ನು ಬಳಸುವಂತಿಲ್ಲ.
ಮಾಹಿತಿ ಮತ್ತು ಲೇಖನ: ಅಂಬಿಕಾ ಸೀತೂರು