ಯಕ್ಷಗಾನದ ಸವ್ಯಸಾಚಿ ತಾಳಮದ್ದಲೆಯ ಅರ್ಥದಾರಿ, ಗತ್ತು ಗಾಂಭೀರ್ಯದ
ಯಕ್ಷಲೋಕದ ಆಸ್ತಿ ವಾಸುದೇವ ಸಾಮಗರು
ಮಲ್ಪೆ ವಾಸುದೇವ ಸಾಮಗರೆಂಬ ಯಕ್ಷಲೋಕದ ತಾಳಮದ್ದಲೆಯ ಮಹಾನ್ ಪ್ರತಿಭೆ ಕಣ್ಮರೆಯಾಗಿ ವರ್ಷ ಕಳೆದಿದೆ. ಸಾಮಗರು ಇಲ್ಲವೆಂದಾಗ ಕಣ್ಮುಂದೆ ಬಂದಿದ್ದು ಎರಡೇ ದೃಶ್ಯಗಳು. ಒಂದು ಅವರ ಮಗುವಿನಂತ ನಗು, ಇನ್ನೊಂದು ಉತ್ತರಕುಮಾರನ ಅರ್ಥದಾರಕೆಯಲ್ಲಿ ಅವರು ಕೂತು ವ್ಯಾಖ್ಯಾನಿಸಿದ್ಧ ಬಂಗಿ. ನಿಮಗೆ ಎಲ್ಲಾದರೂ ಯೂ ಟ್ಯೂಬ್ ನಲ್ಲಿ "ಕಪಟ ನಾಟಕ ರಂಗ" ಯಕ್ಷ ಭಾಗವತಿಕೆಯ ಜುಗಲ್ ಬಂದಿ ಸಿಕ್ಕರೆ ಮರೆಯದೇ ನೋಡಿ. ಹಳೆಯ ತುಣಕದು; ಧರ್ಮಸ್ಥಳ ಮೇಳದ ಧ್ರುವತಾರೆ ಪುತ್ತಿಗೆ ರಘುರಾಮ ಹೊಳ್ಳರು ಮತ್ತು ಸವ್ಯಸಾಚಿ ವಾಸುದೇವ ಸಾಮಗರ ಮನ ತಣಿಯುವ
ಜುಗಲ್ ಬಂದಿ. ಯಾರಿಗೆ ಯಾರು ಸಾಟಿ? ಜೊತೆಗೆ ಸಾಧ್ಯವಾದರೇ, ಉತ್ತರ ಕುಮಾರ ಮತ್ತು ಅರ್ಜುನನ ಅರ್ಥಧಾರಿಕೆಯ ಪ್ರಸಂಗ ನೋಡಿ. ವಾಸುದೇವ ಸಾಮಗರ ಅಸಲು ಸಾಮರ್ಥ್ಯವೇನು ಅನ್ನುವ ಸಣ್ಣ ಝಲಕ್ ಅದರಲ್ಲಿದೆ. ಉತ್ತರ ಭೂಪನಾಗಿ ವಾಸುದೇವ ಸಾಮಗರ ಅಬ್ಬರ, ಹುಸಿ ಪರಾಕ್ರಮದ ಮಾತುಗಳು, ನಗು ಉಕ್ಕಿಸುವ ಪಂಚಿಂಗ್ ಡೈಲಾಗ್ ಗಳು ಮರೆಯಲು ಸಾಧ್ಯವೇ?
ಎಷ್ಟಾದರೂ ಅದು ಯಕ್ಷಗಾನವನ್ನು ರಕ್ತದಲ್ಲೇ ಬಸಿದುಕೊಂಡು ಬಂದ ವಂಶ. ಮಲ್ಪೆ ಹರಿದಾಸ ಸಾಮಗರನ್ನು ದೊಡ್ಡ ಸಾಮಗರೆಂದೇ ಈಗಲೂ ಯಕ್ಷರಂಗ ಗುರುತಿಸುತ್ತದೆ. ಚಿಕ್ಕ ಸಾಮಗರು ವಾಸುದೇವರು; ಆ ವಂಶದ ಮೂರನೇ ಜನರೇಶನ್ ಅಪ್ಪಟ ಪ್ರತಿಭಾವಂತ ವಾಸುದೇವ ಸಾಮಗರ ಪುತ್ರ ಪ್ರದೀಪ್ ಸಾಮಗ. ವಾಸುದೇವ ಸಾಮಗರಿಗೆ ಒಂದು ಕಾಲದಲ್ಲಿ ಅತ್ಯಂತ ಪ್ರಖ್ಯಾತಿ ತಂದು ಕೊಟ್ಟ ಪಾತ್ರ ಯಕ್ಷಲೋಕ ವಿಜಯ ಪ್ರಸಂಗದ ಪ್ರದೀಪನ ಪಾತ್ರ. ಪ್ರಾಯಶಃ ಹಾಗಾಗೇ ತಮ್ಮ ಪುತ್ರನಿಗೂ ಪ್ರದೀಪ ಅಂತ ಹೆಸರಿಟ್ಟರೇನೋ!
ವಾಸುದೇವ ಸಾಮಗರು ಇವತ್ತು ನಿನ್ನೆಯವರಲ್ಲ, ಯಕ್ಷಲೋಕದ ಶಂಕರ್ ನಾಗ್ ಕಾಳಿಂಗ ನಾವುಡರ ಕಾಲದವರು. ಕಾಳಿಂಗ ನಾವುಡರು ಬದುಕಿದ್ದಾಗಲೇ ಸಾಲಿಗ್ರಾಮ ಮೇಳದಲ್ಲಿದ್ದವರು. ಧರ್ಮಸ್ಥಳ, ಕದ್ರಿ, ಕರ್ನಾಟಕ ಸುರತ್ಕಲ್, ಪೆರ್ಡೂರು ಮೇಳದಲ್ಲಿ ಯಕ್ಷ ಸೇವೆ ಸಲ್ಲಿಸಿದವರು. ಚೈತ್ರಪಲ್ಲವಿ, ನಾಗಶ್ರೀ, ಭಾನುತೇಜಸ್ವಿ ಪ್ರಸಂಗಗಳು ಪೂರ್ಣವಾಗಿದ್ದೇ ಸಾಮಗರ ಉಪಸ್ಥಿತಿಯಿಂದಾಗಿ. ರುಕ್ಮಾಂಗದ ಮೋಹಿನಿ, ಅಂಬೆ ಪರಶುರಾಮ, ಕಂಸ ಕೃಷ್ಣ, ಭೀಷ್ಮ, ದಶರಥ ಕೈಕೆ, ಶನೈಶ್ವರ ಮಹಾತ್ಮೆಯ ವಿಕ್ರಮಾದಿತ್ಯ, ಶಕುನಿ ಹೀಗೆ ಸಾಮಗರು ನಿರ್ವಹಿಸಿದ ಪಾತ್ರಗಳು ಸದಾ ಯಕ್ಷ ಪ್ರೇಮಿಗಳ ಮನಸಿನಲ್ಲಿ ಚಿರಸ್ಥಾಯಿ. ಮಲ್ಪೆ ಹರಿದಾಸ ಸಾಮಗರ ಸ್ಮರಣೆಯ ಯಕ್ಷಮಾಲಿಕೆಯಲ್ಲಿ ಮೈರಾವಣ ಕಾಳಗ, ಶಾಪಗ್ರಸ್ತ ಕರ್ಣ, ಇತ್ಯಾದಿ ಪ್ರಸಂಗಗಳ ಮೂಲಕ ವಾಸುದೇವ ಸಾಮಗರು ಸದಾ ಬದುಕಿರುತ್ತಾರೆ. ತೆಂಕು
ಬಡಗು ತಿಟ್ಟಿನ ನಡುವೆ ಸೇತುವೆ ಬೆಸೆದ, ಯಕ್ಷ ಸಂಘಟಕ, ಭಾಗವತ, ಅರ್ಥದಾರಿ, ಪಾತ್ರದಾರಿ, ತಾಳಮದ್ದಲೆಯ ವ್ಯಾಖ್ಯಾನಕಾರ, ತಮ್ಮದೇ ಸಂಯಮಂ ಸಂಸ್ಥೆಯನ್ನು ಕಟ್ಟಿಕೊಂಡು ಯಕ್ಷಗಾನ ಕಲೆಯ ಅಸ್ಥಿತ್ವವನ್ನು ಉಳಿಸಲು ನಿರಂತರವಾಗಿ ಶ್ರಮಿಸುತ್ತಿದ್ದವರು ಮಲ್ಪೆ ವಾಸುದೇವ ಸಾಮಗರು.
ಸಾಮಗರು ಖಂಡಿತವಾದಿ; ನೇರಾ ನೇರ ಬಿಡುಬೀಸು ಮಾತಿಗೆ ಹೆಸರುವಾಸಿಯಾದವರು. ಪೆರ್ಡೂರು ಸಾಲಿಗ್ರಾಮ ಮೇಳಗಳಲ್ಲಿ ವಿಶಿಷ್ಟ ಹೆಸರು ಮಾಡಿದ್ದ ಸಾಮಗರು ರಂಗಸ್ಥಳಕ್ಕೆ ಬಂದರೆ ಮಾತಿನ ಮಂಟಪದಲ್ಲಿ ಪಾತ್ರಕಟ್ಟುತ್ತಿದ್ದ ಅಸೀಮ ಪ್ರತಿಭೆಯ ಯಕ್ಷಾವಧೂತ. ಕಾಳಿಂಗ ನಾವಡರು ನಿರ್ವಹಿಸಬೇಕಿದ್ದ ಸಾಲ್ವ ಶೃಂಗಾರ ಕ್ಯಾಸೆಟ್ ಅನ್ನು ರಮೇಶ್ ಬೇಗಾರ್ ಮರು ಸೃಷ್ಟಿಸಿದಾಗ ಅದರಲ್ಲಿ ಸಾಲ್ವನ ದೂತನ ಪಾತ್ರ ಮಾಡಿದ್ದವರು ವಾಸುದೇವ ಸಾಮಗರು. ಹಾಗೆಯೇ ವಿಗಡ ವಿಚಿತ್ರರಾಯ ಎಂಬ ಹಾಸ್ಯ ಕ್ಯಾಸೆಟ್ ನಲ್ಲಿ ಹಾಸ್ಯ ರಾಜನ ಪಾತ್ರವನ್ನು ಸಹ ಮಾಡಿದ್ದರಂತೆ. ಒಂದು ಕಾಲದಲ್ಲಿ ರಾಮದಾಸ ಸಾಮಗರ ವಿಶ್ವಾಮಿತ್ರ ವಾಸುದೇವ ಸಾಮಗರ ಮೇನಕೆ ಯಕ್ಷಲೋಕದ ಖ್ಯಾತ ಜೋಡಿಯಾಗಿತ್ತಂತೆ. ಅದನ್ನೆ ಈ ತಲೆಮಾರಿಗೆ ಅನ್ವಯಿಸಿ ವಾಸುದೇವ ಸಾಮಗರ ಮತ್ತು ಅವರ ಪುತ್ರ ಪ್ರದೀಪ ಸಾಮಗರು ಬೆಂಗಳೂರಿನಲ್ಲಿ ಪ್ರದರ್ಶನ ನೀಡಿದ್ದನ್ನು ರಮೇಶ್ ಬೇಗಾರ್ ಈಗಲೂ ನೆನಪಿಸಿಕೊಳ್ಳುತ್ತಾರೆ. ಯಕ್ಷ ಭಾಗವತಿಗೆಯ ಧ್ರುವತಾರೆ ಕಾಳಿಂಗ ನಾವಡರೊಂದಿಗೆ ವಾಸುದೇವ ಸಾಮಗರದ್ದು ಅತ್ಯಂತ ಅಪೂರ್ವ ಸ್ನೇಹ. ಸುಪ್ರಸಿದ್ಧ ಪ್ರಸಂಗ ನಾಗಶ್ರೀಯ ಶುಭ್ರಾಂಗನ ಪಾತ್ರಕ್ಕೆ
ಜೀವತುಂಬಿ ಅಭಿನಯಿಸಿದ್ದವರು ಸಾಮಗರು.
ಕೃಪೆ – ಹಿಂದವೀ ಸ್ವರಾಜ್ಯ
-ರೂಪಾ ಮಾಲತೇಶ್,