ಈ ನಗರಕ್ಕಿದೆ ಭವ್ಯ ಇತಿಹಾಸ..! ಇಲ್ಲಿನ ಪ್ರಾಕೃತಿಕ ಸೌಂದರ್ಯಕ್ಕೆ ಎಂಥವರೂ ಮಾರಿ ಹೋಗದೇ ಇರಲ್ಲ..!
ಬಂದರು ನಗರಿ ಎಂತಲೇ ಖ್ಯಾತಿ ಪಡೆದ ವಿಶಾಖಪಟ್ಟಣಂ ಅಥವಾ ವೈಜಾಗ್ ಮಾನ್ಸೂನ್ ನಲ್ಲಿ ಭೇಟಿ ನೀಡಲೇಬೇಕಾದ ಸ್ಥಳ. ಭಾರತದ ಆಗ್ನೇಯ ಕರಾವಳಿಯಲ್ಲಿರುವ ಇದು, ಆಂಧ್ರ ಪ್ರದೇಶದ ಎರಡನೇ ದೊಡ್ಡ ನಗರವಾಗಿದೆ. ಪ್ರಾಥಮಿಕವಾಗಿ ಒಂದು ಕೈಗಾರಿಕಾ ನಗರವಾಗಿರುವ ವೈಜಾಗ್ ತನ್ನ ಸುಂದರ ತೀರ,ರಮಣೀಯ ದಿಣ್ಣೆಗಳು, ಸಮೃದ್ಧ ಹಸಿರು ಮತ್ತು ಶ್ರೀಮಂತ ಇತಿಹಾಸ ಹಾಗೂ ಸಂಸ್ಕೃತಿಗಳಿಂದಾಗಿ ಉತ್ತಮ ಪ್ರವಾಸಿ ತಾಣವಾಗಿಯೂ ಮಾರ್ಪಡುತ್ತಿರುವುದು ಸ್ವಾಗತಾರ್ಹ. ಹಿಂದೂಗಳ ಶೌರ್ಯ ದೇವತೆಯಾದ ವಿಶಾಖಾದಿಂದ ಈ ನಗರಕ್ಕೆ ವಿಶಾಖಪಟ್ಟಣಂ ಎಂಬ ಹೆಸರು ಬಂದಿದೆ.
ಈ ನಗರಕ್ಕಿದೆ ಭವ್ಯ ಇತಿಹಾಸ..!
ವಿಶಾಖಪಟ್ಟಣ ಮೊದಲು ಕಳಿಂಗ ರಾಜ್ಯದ ಭಾಗವಾಗಿತ್ತು. ನಂತರ ವೆಂಗಿ, ಪಲ್ಲವ, ಪೂರ್ವ ಗಂಗ ಸಾಮ್ರಾಜ್ಯಗಳಿಗೆ ಸೇರಿತ್ತು. ದಾಖಲೆಗಳ ಪ್ರಕಾರ ೧೧ ಮತ್ತು ೧೩ನೇ ಶತಮಾನದ ಕಾಲದಲ್ಲಿ ಚೋಳ ಹಾಗೂ ಗಜಪತಿ ಸಾಮ್ರಾಜ್ಯಗಳ ತಿಕ್ಕಾಟದ ಅವಧಿಯಲ್ಲಿ ಕಟ್ಟಲ್ಪಟ್ಟಿತು. ಅನಂತರ ೧೫ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯವು ವಶಪಡಿಸಿಕೊಂಡಿತು. ೧೬ನೇ ಶತಮಾನದಲ್ಲು ಮೊಘಲ್ ಸಾಮ್ರಾಜ್ಯಕ್ಕೆ ಸೇರಿ ಅನಂತರ ಯುರೋಪಿಯನ್ ದೇಶಗಳು ವ್ಯಾಪಾರಾಸಕ್ತಿ ಚಟುವಟಿಕೆಗಳ ನೆಲೆಯಾಯಿತು. ೧೮ನೇ ಶತಮಾನದ ಕೊನೆಯ ವೇಳೆಗೆ ಇದು ಫ್ರೆಂಚರ ಆಳ್ವಿಕೆಗೆ ಒಳಪಟ್ಟಿತು. ೧೮೦೪ರಿಂದ ೧೯೪೭ರ ಭಾರತದ ಸ್ವಾತಂತ್ರ್ಯದವರೆಗೆ ಬ್ರಿಟಿಶರ ಆಳ್ವಿಕೆಗೆ ಒಳಪಟ್ಟಿತ್ತು.
ಈ ನಗರವು ಅತಿಹಳೆಯ ಹಡಗುನೆಲೆ ಹಾಗೂ ಪೂರ್ವಕರಾವಳಿಯ ನೈಸರ್ಗಿಕ ಬಂದರನ್ನು ಹೊಂದಿದೆ. ಭಾರತೀಯ ನೌಕಾಸೇನೆಯ ಪೂರ್ವ ಕಮಾಂಡ್ ನ ಹಾಗೂ ಪೂರ್ವಕರಾವಳಿ ರೈಲ್ವೆ ವಲಯದ ಪ್ರಧಾನ ಕಛೇರಿಗಳು ಇಲ್ಲಿವೆ.
ವಿಶಾಖಪಟ್ಟಣವು ಶ್ರೀ ವೆಂಕಟೇಶ್ವರ ಕೊಂಡ, ರೋಸ್ ಹಿಲ್ ಮತ್ತು ದರ್ಗಾ ಕೊಂಡ ಎಂಬ ಬೆಟ್ಟಗಳಿಂದ ಸುತ್ತುವರೆದಿವೆ. ಇಲ್ಲಿನ ಪ್ರತಿ ಬೆಟ್ಟಗಳಲ್ಲಿಯೂ ವಿವಿಧ ಧರ್ಮಗಳ ಪುಣ್ಯಕ್ಷೇತ್ರಗಳು ನೆಲೆಸಿವೆ. ವೆಂಕಟೇಶ್ವರ ಬೆಟ್ಟದಲ್ಲಿ ಶಿವನ ದೇವಸ್ಥಾನವಿದ್ದರೆ, ರೋಸ್ ಹಿಲ್ ನಲ್ಲಿ ವರ್ಜಿನ್ ಮೇರಿ ಚರ್ಚ್ ಮತ್ತು ದರ್ಗಾ ಕೊಂಡ ಇಸ್ಲಾಮಿಕ್ ಸಂತ ಬಾಬಾ ಇಶಾಕ್ ಮದಿನಾರ ಸಮಾಧಿಯನ್ನು ಹೊಂದಿದೆ.
ರಿಷಿಕೊಂಡ ಬೀಚ್, ಗಂಗಾವರಂ ಬೀಚ್, ಭಿಮ್ಲಿ ಮತ್ತು ಯರಡ ಬೀಚ್ ಗಳು ನಗರದ ಪೂರ್ವ ಭಾಗದಲ್ಲಿನ ಕಡಲತೀರಗಳು. ಇತರ ಪ್ರವಾಸಿ ಆಕರ್ಷಣೆಗಳಲ್ಲಿ ಕೈಲಾಸಗಿರಿ ಹಿಲ್ ಪಾರ್ಕ್, ಸಿಂಹಾಚಲಂ ಬೆಟ್ಟಗಳು, ಅರಕು ಕಣಿವೆ, ಕಂಬಲಕೊಂಡ ವನ್ಯಮೃಗ ಅಭಯಾರಣ್ಯ, ಜಲಾಂತರ್ಗಾಮಿ ವಸ್ತುಸಂಗ್ರಹಾಲಯ, ವಾರ್ ಮೆಮೋರಿಯಲ್ ಮತ್ತು ನೌಕಾ ವಸ್ತುಸಂಗ್ರಹಾಲಯಗಳು ಸೇರಿವೆ.
ಇಲ್ಲಿ ಸಮುದ್ರ ತೀರಗಳನ್ನು ಇಷ್ಟಪಡುವವರು ಮಾತ್ರವಲ್ಲದೇ ರಮಣೀಯ ಕಣಿವೆ ಮತ್ತು ಗುಡ್ಡಗಳನ್ನು ನೋಡಿ ಆನಂದಿಸಲು ಸಹ ಸಹಸ್ರಾರು ಪ್ರವಾಸಿಗರು ಆಗಮಿಸುತ್ತಾರೆ. ಇನ್ನು ವಿಶಾಖಪಟ್ಟಣಂ ಸಿನಿಮಾ ಮಂದಿಗೆ ಅಚ್ಚುಮೆಚ್ಚಿನ ತಾಣ. ತೆಲುಗು, ತಮಿಳು ಸೇರಿದಂತೆ ದಕ್ಷಿಣ ಭಾರತದ ಬಹುತೇಕ ಸಿನಿಮಾಗಳು ಇಲ್ಲಿ ಚಿತ್ರೀಕರಣಗೊಂಡಿವೆ. ನಟ ಶ್ರೀಧರ್, ನಟಿ ಸರಿತಾ ಅಭಿನಯದ ಬ್ರಹ್ಮಗಂಟು ಚಿತ್ರದ ಚಿತ್ರೀಕರಣವಾಗಿದ್ದು ಇಲ್ಲಿಯೇ.
ವಿಶಾಖಪಟ್ಟಣಂ ಗೆ ರಸ್ತೆ, ರೈಲು ಮತ್ತು ವಾಯು ಮಾರ್ಗದ ಮೂಲಕ ತೆರಳಬಹುದು. ನಿಮ್ಮ ಬಜೆಟ್ ಗನುಗುಣವಾಗಿ ಇಲ್ಲಿ ತಂಗಲು ಹೊಟೇಲ್ ಮತ್ತು ರೆಸಾರ್ಟ್ ಗಳಿವೆ. ಮಾನ್ಸೂನ್ ಎಂಜಾಯ್ ಮಾಡುವವರು ವಿಶಾಖಪಟ್ಟಣಂ ಗೆ ಭೇಟಿ ನೀಡಲೇಬೇಕು.