ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧದ ಕಾರ್ಮೋಡ ಈಗ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಗ್ಯಾಸ್, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನತೆಗೆ, ವಿಶೇಷವಾಗಿ ಮದ್ಯ ಪ್ರಿಯರಿಗೆ ಈಗ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ. ಇರಾನ್ ಸೇರಿದಂತೆ ಏಷ್ಯಾ ಮತ್ತು ಯುರೋಪ್ ಭಾಗಗಳಲ್ಲಿ ನಡೆಯುತ್ತಿರುವ ಯುದ್ಧದ ನೇರ ಪರಿಣಾಮ ಈಗ ಬಾರ್ ಹಾಗೂ ಪಬ್‌ಗಳ ಮೇಲೆ ಬೀರಲಿದ್ದು, ಶೀಘ್ರದಲ್ಲೇ ಬಿಯರ್ ಮತ್ತು ಮದ್ಯದ ಬೆಲೆಯಲ್ಲಿ ಭಾರಿ ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಗಗನಮುಖಿಯಾಗಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 103 ಡಾಲರ್‌ಗೆ ತಲುಪಿದೆ. ಇಂಧನ ಸ್ಥಾವರಗಳ ಮೇಲಿನ ನಿರಂತರ ದಾಳಿ ಮತ್ತು ವಿಶ್ವದ ಪ್ರಮುಖ ತೈಲ ಸಾಗಣೆ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ಅಡೆತಡೆಗಳೇ ಈ ಹಠಾತ್ ಬೆಲೆ ಏರಿಕೆಗೆ ಪ್ರಮುಖ ಕಾರಣ. ಈ ತೈಲ ಬಿಕ್ಕಟ್ಟು ಕೇವಲ ವಾಹನ ಸವಾರರಿಗಷ್ಟೇ ಅಲ್ಲ, ಮದ್ಯದ ಉತ್ಪಾದನಾ ವಲಯಕ್ಕೂ ದೊಡ್ಡ ಸಂಕಷ್ಟ ತಂದೊಡ್ಡಿದೆ.
ಯುದ್ಧದ ಈ ಎಫೆಕ್ಟ್ ಬಿಯರ್ ಉತ್ಪಾದನೆ ಮತ್ತು ಪೂರೈಕೆ ಸರಪಳಿಯ ಮೇಲೆ ಪ್ರಮುಖವಾಗಿ ಮೂರು ಹಂತಗಳಲ್ಲಿ ಗಂಭೀರ ಹೊಡೆತ ನೀಡುತ್ತಿದೆ:
ಒಂದು: ಬಿಯರ್ ತಯಾರಿಕಾ ಪ್ರಕ್ರಿಯೆ ಮತ್ತು ಅದನ್ನು ಗ್ರಾಹಕರಿಗೆ ನೀಡುವ ಮೊದಲು ತಂಪಾಗಿಡಲು ಅಪಾರ ಪ್ರಮಾಣದ ವಿದ್ಯುತ್ ಮತ್ತು ಗ್ಯಾಸ್ ಅಗತ್ಯವಿದೆ. ಜಾಗತಿಕ ಇಂಧನ ಬಿಕ್ಕಟ್ಟಿನಿಂದಾಗಿ ಪ್ರಸ್ತುತ ಇದರ ವೆಚ್ಚ ಹಲವು ಪಟ್ಟು ದುಪ್ಪಟ್ಟಾಗಿದೆ.
ಎರಡು: ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿರುವುದರಿಂದ, ಕಾರ್ಖಾನೆಗಳಿಂದ ಪಬ್‌ಗಳಿಗೆ ಬಿಯರ್ ಸಾಗಿಸುವ ಸಾರಿಗೆ ವೆಚ್ಚವೂ ವಿಪರೀತವಾಗಿ ಹೆಚ್ಚಾಗಿದೆ. ಇದು ನೇರವಾಗಿ ಮದ್ಯದ ಬೆಲೆಯ ಮೇಲೆ ಪರಿಣಾಮ ಬೀರುತ್ತಿದೆ.
ಮೂರು: ಪಬ್‌ಗಳಲ್ಲಿ ಬಿಯರ್ ರುಚಿ ಕೆಡದಂತೆ ಹಾಗೂ ಹಾಳಾಗದಂತೆ ಶೈತ್ಯೀಕರಣ ಘಟಕಗಳಲ್ಲಿ (ಕೂಲರ್ ಗಳಲ್ಲಿ) ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲ ಸಂರಕ್ಷಿಸಿಡುವ ನಿರ್ವಹಣಾ ವೆಚ್ಚ ಬಾರ್ ಮಾಲೀಕರಿಗೆ ಅಕ್ಷರಶಃ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಉತ್ಪಾದನೆ ಮತ್ತು ನಿರ್ವಹಣಾ ವೆಚ್ಚ ಈ ಪಾಟಿ ಹೆಚ್ಚಾದಾಗ, ಅದರ ನೇರ ಹೊರೆ ಬೀಳುವುದು ಗ್ರಾಹಕರ ಮೇಲೆಯೇ. ಮುಂದಿನ ಕೆಲವೇ ವಾರಗಳಲ್ಲಿ ಮದ್ಯ ಪ್ರಿಯರು ತಾವು ಕುಡಿಯುವ ಪ್ರತಿ ಗ್ಲಾಸ್ ಬಿಯರ್‌ಗೆ ಹೆಚ್ಚಿನ ಹಣ ತೆರಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ.
ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳು ಮುಂಚಿತವಾಗಿ ಮಾಡಿಕೊಂಡಿರುವ ಒಪ್ಪಂದಗಳ ಮೂಲಕ ಈ ನಷ್ಟವನ್ನು ಸ್ವಲ್ಪಮಟ್ಟಿಗೆ ತಡೆದುಕೊಳ್ಳಬಹುದು. ಆದರೆ, ಸ್ಥಳೀಯ ಬಿಯರ್ ಉತ್ಪಾದಕರು ಮತ್ತು ಸಣ್ಣ ಸ್ವತಂತ್ರ ಪಬ್‌ಗಳ ಪರಿಸ್ಥಿತಿ ಶೋಚನೀಯವಾಗಲಿದೆ. ಈಗಾಗಲೇ ಅಲ್ಪ ಲಾಭದಲ್ಲಿ ವ್ಯವಹಾರ ನಡೆಸುತ್ತಿರುವ ಸಣ್ಣಪುಟ್ಟ ಬಾರ್‌ಗಳು ಈ ಹೆಚ್ಚುವರಿ ವೆಚ್ಚವನ್ನು ಭರಿಸಲಾಗದೆ ಬಾಗಿಲು ಮುಚ್ಚುವ ಹಂತಕ್ಕೆ ತಲುಪಿವೆ ಎಂದು ವರದಿಗಳು ಎಚ್ಚರಿಸಿವೆ.
ಜಾಗತಿಕ ಮಟ್ಟದ ಈ ಆರ್ಥಿಕ ಬಿಕ್ಕಟ್ಟು ಕೇವಲ ಬ್ರಿಟನ್ ಅಥವಾ ಯುರೋಪ್‌ಗೆ ಸೀಮಿತವಾಗಿಲ್ಲ. ಭಾರತದ ಪ್ರಮುಖ ಮಹಾನಗರಗಳಾದ ಮುಂಬೈ, ದೆಹಲಿ ಮತ್ತು ಚೆನ್ನೈ ಸೇರಿದಂತೆ ಹಲವು ನಗರಗಳಲ್ಲಿರುವ ಸಣ್ಣ ಬಾರ್ ಮತ್ತು ಪಬ್‌ಗಳ ಮಾಲೀಕರು ಮತ್ತು ಗ್ರಾಹಕರ ಮೇಲೂ ತೀವ್ರ ಪರಿಣಾಮ ಬೀರುತ್ತಿದೆ. ಒಟ್ಟಿನಲ್ಲಿ, ಎಲ್ಲೋ ನಡೆಯುತ್ತಿರುವ ಯುದ್ಧ, ಇಲ್ಲಿನ ಮದ್ಯ ಪ್ರಿಯರ ಜೇಬಿಗೆ ಕನ್ನ ಹಾಕುವುದಂತೂ ಸತ್ಯ.







