ಬೆಂಗಳೂರು: ಬಿಜೆಪಿಯಿಂದ ಟಿಕೆಟ್ ಸಿಗದಿದ್ದಕ್ಕೆ ಚನ್ನಪಟ್ಟಣ ಉಪಚುನಾವಣೆಯಲ್ಲಿ ಸಿ.ಪಿ ಯೋಗೇಶ್ವರ್ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಮುಂದಾಗಿದ್ದಾರೆ.
ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಸಿಪಿವೈಗೆ ಬಿಜೆಪಿ ಕಡೆಯಿಂದ ಯಾವುದೇ ಗ್ರೀನ್ ಸಿಗ್ನಲ್ ಸಿಗದ ಹಿನ್ನೆಲೆಯಲ್ಲಿ ಕಣಕ್ಕೆ ಇಳಿಯಲು ನಿರ್ಧರಿಸಿದ್ದಾರೆ. ಹೀಗಾಗಿ ಇಂದು ಸಂಜೆ ಬಿಜೆಪಿ ಪರಿಷತ್ ಸದಸ್ಯತ್ವಕ್ಕೆ ಯೋಗೇಶ್ವರ್ ರಾಜೀನಾಮೆ ಸಲ್ಲಿಕೆಗೆ ಮುಂತಾಗಿದ್ದಾರೆ. ಈ ಕುರಿತು ಹುಬ್ಬಳ್ಳಿಯಲ್ಲಿರುವ ಸಭಾಪತಿ ಹೊರಟ್ಟಿ ಭೇಟಿಗಾಗಿ ಸಿಪಿವೈ ತೆರಳಿದ್ದಾರೆ. ಅಲ್ಲದೇ ನಾಮಪತ್ರ ಸಲ್ಲಿಕೆಗೆ ವಕೀಲರನ್ನು ಯೋಗೇಶ್ವರ್ ಸಂಪರ್ಕಿಸಿದ್ದಾರೆ.
ಈ ವಿಷಯವಾಗಿ ಮಾತನಾಡಿರುವ ಯೋಗೇಶ್ವರ್, ಜೆಡಿಎಸ್ ಚಿಹ್ನೆಯಿಂದ ಸ್ಪರ್ಧಿಸಬೇಕೆಂಬ ಆಫರ್ ನ್ನು ನಾನು ತಿರಸ್ಕರಿಸಿದ್ದೇನೆ. ನನಗೆ ಸ್ವತಂತ್ರವಾಗಿ ಸ್ಪರ್ಧಿಸುವ ಯೋಚನೆ ಇದೆ. ಇನ್ನೂ ಎರಡು ದಿನ ಕಾದು ನೋಡುವ ತಂತ್ರವನ್ನು ಉಪಯೋಗಿಸುತ್ತೇನೆ. ನಾನು ಈ ಕ್ಷಣಕ್ಕೂ ಬಿಜೆಪಿಯಿಂದ ಸ್ಪರ್ಧೆ ಮಾಡಬೇಕು ಎಂದುಕೊಂಡಿದ್ದೇನೆ ಎಂದಿದ್ದಾರೆ.