ತೆಲುಗಿನಲ್ಲೂ ‘ಪೊಗರು’ ತೋರಿಸೋಕೆ ಬರ್ತಿದೆ ‘ಖರಾಬು’ ಹಾಡು
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರ್ ಸಿನಿಮಾದ ಖರಾಬು ಹಾಡು ಯೂಟ್ಯೂಬ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಬಿಡುಗಡೆಯಾಗಿ ಎರಡು ತಿಂಗಳಲ್ಲಿ ಯೂಟ್ಯೂಬ್‌ನಲ್ಲಿ 31 ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡು ದಾಖಲೆ ಮಾಡಿದೆ. ಈ ಹಾಡಿಗೆ ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು ಸೇರಿದಂತೆ ವಿವಿಧ ಭಾಷೆಯ ಸಿನಿಮಾ ಅಭಿಮಾನಿಗಳೂ ಫಿದಾ ಆಗಿದ್ದಾರೆ. ಇದರಿಂದ ಪುಳಕಿತಗೊಂಡಿರುವ ಚಿತ್ರತಂಡ, ಹಾಡಿನ ಮೇಕಿಂಗ್ ವಿಡಿಯೋ ಕೂಡ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಏತನ್ಮಧ್ಯೆ ಈ ಹಾಡಿಗೆ ಇರುವ ಬೇಡಿಕೆ ಕಂಡು ತೆಲುಗಿನಲ್ಲಿಯೂ ಹಾಡನ್ನು ಸಿದ್ಧಪಡಿಸಿ ಬಿಡುಗಡೆ ಮಾಡಲು ಮುಂದಾಗಿದೆ ಚಿತ್ರತಂಡ.
ಹೌದು..! ಖರಾಬು ಹಾಡಿಗೆ ತೆಲುಗಿಗರು ಜೈ ಹೋ ಎಂದಿದ್ದು, ಯೂಟ್ಯೂಬ್ ನಲ್ಲಿ ಹಾಡು ಇಷ್ಟಪಟ್ಟು ಕಾಮೆಂಟ್ ಹಾಕುತ್ತಿದ್ದಾರೆ. ಹಾಗಾಗಿ ಈ ಹಾಡನ್ನು ತೆಲುಗಿನಲ್ಲಿಯೂ ಮಾಡಿದರೆ ಮತ್ತಷ್ಟು ಅಭಿಮಾನಿಗಳನ್ನು ಸೆಳೆದುಕೊಳ್ಳಬಹುದು. ಇದರಿಂದ ಚಿತ್ರದ ಪ್ರಮೋಷನ್ ಗೂ ನೆರವಾಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ‘ಖರಾಬು’ ತೆಲುಗು ಆವೃತ್ತಿಯೂ ಸಿದ್ಧವಾಗುತ್ತಿದೆ.
ಕನ್ನಡದ ಖರಾಬು ಹಾಡಿಗೆ ಚಂದನ್ ಶೆಟ್ಟಿ ಸಂಗೀತ ನೀಡಿರುವುದಲ್ಲದೆ ತಾವೇ ಬರೆದು ಹಾಡಿದ್ದಾರೆ. ಕನ್ನಡದಲ್ಲಿ ಸೂಪರ್ ಹಿಟ್ ಆಗಿರುವ ಈ ಹಾಡನ್ನು ತೆಲುಗಿನಲ್ಲಿ 125ಕ್ಕೂ ಹೆಚ್ಚು ಚಿತ್ರಗಳಿಗೆ ಹಾಡು ಬರೆದಿರುವ ಸಾಹಿತಿ ಭಾಸ್ಕರಭಟ್ಲಾ ರವಿಕುಮಾರ್ ರಚಿಸುತ್ತಿದ್ದಾರೆ. ಧ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿರುವ ಈ ಹಾಡು, ತೆಲುಗಿನಲ್ಲಿಯೂ ಹಿಟ್ ಆಗುವ ನಿರೀಕ್ಷೆ ಮೂಡಿಸಿದೆ








