ನವದೆಹಲಿ, ಮೇ 21 : ಕೊರೊನಾ ಕಾಟದ ನಡುವೆ ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಅಂಫಾನ್ ಚಂಡಮಾರುತ ಅಬ್ಬರಿಸುತ್ತಿದ್ದು, ಗಂಟೆಗೆ ಸುಮಾರು 185 ಕಿ.ಮೀ ವೇಗದಲ್ಲಿ ಪ್ರಬಲವಾದ ಬಿರುಗಾಳಿ ಬೀಸುತ್ತಿದೆ. ಪರಿಣಾಮ ಈ ಎರಡು ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಮರಗಳು, ಕಟ್ಟಡಗಳು ನೆಲಕಚ್ಚಿವೆ. ಪಶ್ಚಿಮ ಬಂಗಾಳದಲ್ಲಿ 10ರಿಂದ 12 ಮಂದಿ ಜೀವ ಕಳೆದುಕೊಂಡಿದ್ದಾರೆ. ಒಡಿಶಾದಲ್ಲಿ ಮೂವರು ಸಾವನ್ನಪ್ಪಿದ್ದಾರೆ.
ಅಂಫಾನ್ ಅಟ್ಟಹಾಸಕ್ಕೆ ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಅಪಾರ ಪ್ರಮಾಣದ ಆಸ್ತಿಪಾಸ್ತಿಗಳು ನಾಶಗೊಂಡಿದ್ದು, ಹಲವೆಡೆ ಬೃಹತ್ ಮರಗಳು ಧರೆಗುರುಳಿವೆ. ಕೋಲ್ಕತಾದಲ್ಲಿ ಅನೇಕ ಕಟ್ಟಡಗಳು ನೆಲಕಚ್ಚಿದ್ದು, ಭಾರಿ ಹಾನಿಯುಂಟಾಗಿದೆ. ಈ ನಡುವೆ ಪಶ್ಚಿಮ ಬಂಗಾಳದಲ್ಲಿ 6.5 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಹಾಗೂ ಒಡಿಶಾದಲ್ಲಿ 1.58 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ನಿನ್ನೆ ಮಧ್ಯಾಹ್ನ 2.30ಕ್ಕೆ ಅಂಫಾನ್ ಚಂಡಮಾರುತ ಪಶ್ಚಿಮ ಬಂಗಾಳದ ದಿಘಾ ಹಾಗೂ ಬಾಂಗ್ಲಾದೇಶದ ಹಟಿಯಾ ದ್ವೀಪದ ನಡುವೆ ಬಂದು ಅಪ್ಪಳಿಸಿತು. ಮೊದಲು 170 ಕಿಮೀ ವೇಗದಲ್ಲಿದ್ದ ಚಂಡಮಾರುತ ಬಳಿಕ 185 ಕಿಮೀ ವೇಗ ಪಡೆದುಕೊಂಡು ಆರ್ಭಟಿಸುತ್ತಾ ಸಾಗಿದೆ. ಚಂಡಮಾರುತದ ಹಿನ್ನೆಲೆ ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಪರಿಣಾಮ ಹಲವೆಡೆ ಜನವಸತಿ ಪ್ರದೇಶಗಳು ನೀರಿನಲ್ಲಿ ಮುಳುಗಿ ಹೋಗಿದ್ದು, ಮರ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ಇನ್ನು ಹೌರಾ ಜಿಲ್ಲೆ ಹಾಗೂ ಉತ್ತರ 24 ಪರಗಣ ಜಿಲ್ಲೆಯಲ್ಲಿ ಮರ ಬಿದ್ದು ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ.
ಮುಂದುವರೆದ ರಕ್ಷಣಾ ಕಾರ್ಯಾಚರಣೆ
ಸದ್ಯ ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ರಾಷ್ಟ್ರೀಯ ವಿಪತ್ತು ಪರಿಹಾರ ಪಡೆಯು(ಎನ್‌ಡಿಆರ್‌ಎಫ್) 20 ತಂಡಗಳನ್ನು ಒಡಿಶಾಗೆ ಹಾಗೂ 19 ತಂಡಗಳನ್ನು ಪಶ್ಚಿಮ ಬಂಗಾಳಕ್ಕೆ ರಕ್ಷಣಾ ಕಾರ್ಯಾಚರನೆಗೆ ಕಳುಹಿಸಿದೆ. ಸದ್ಯ ಈ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಈ ಮಧ್ಯೆ ಇನ್ನೂ 1ರಿಂದ 2 ದಿನಗಳ ಕಾಲ ಈ ಚಂಡಮಾರುತ ಅಬ್ಬರಿಸುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.








