ಏಕದಿನ ಸರಣಿ : ಆಸೀಸ್ ಅಬ್ಬರ, ಟೀಂ ಇಂಡಿಯಾಗೆ 390 ರನ್ ಗುರಿ
ಸಿಡ್ನಿ : ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಆಸೀಸ್ ಬ್ಯಾಟ್ಸ್ ಮನ್ ಗಳು ಅಬ್ಬರಿಸಿದ್ದಾರೆ. ಕಾಂಗರೂಗಳ ಓಟಕ್ಕೆ ಬ್ರೇಕ್ ಹಾಕಲು ವಿಫಲವಾದ ಭಾರತಕ್ಕೆ ಈ ಪಂದ್ಯ ಗೆಲ್ಲಲು 390 ರನ್ ಗಳಿಸುವ ಅವಶ್ಯಕತೆ ಇದೆ.
ಹೌದು..! ಏಕದಿನ ಸರಣಿಯ ಎರಡನೇ ಪಂದ್ಯದಲ್ಲೂ ಅಬ್ಬರಿಸಿದ ಆತಿಥೇಯ ಆಸ್ಟ್ರೇಲಿಯಾ ತಂಡ ಭಾರತಕ್ಕೆ 390 ರನ್?ಗಳ ಬೃಹತ್ ಗುರಿ ನೀಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸೀಸ್ ಪಡೆ ನಿಗದಿತ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 389 ರನ್ ಕಲೆಹಾಕಿದೆ.
ಆಸ್ಟ್ರೇಲಿಯಾದ ಪರ ಆರಂಭಿಕರಾದ ಡೇವಿಡ್ ವಾರ್ನರ್ (83), ನಾಯಕ ಆಯರೂನ್ ಫಿಂಚ್ (60) ಅದ್ಭುತ ಆರಂಭ ನೀಡಿದರು. ಬಳಿಕ ಕ್ರೀಸ್ ಗೆ ಬಂದ ಸ್ಟೀವ್ ಸ್ಮಿತ್ ಟೀಂ ಇಂಡಿಯಾ ಬೌಲರ್ ಗಳನ್ನು ಬೆಂಡೆತ್ತಿದ್ದರು. ಅವರು 64 ಎಸೆತಗಳಲ್ಲಿ 104 ರನ್ ಗಳಿಸಿ ಔಟ್ ಆದರು. ಇನ್ನು ಮಾರ್ನಸ್ ಲಬುಶೇನ್ (70) ಮತ್ತು ಗ್ಲೇನ್ ಮ್ಯಾಕ್ಸ್ ವೆಲ್ (60*) ಅತ್ಯುತ್ತಮ ಆಟದ ಮೂಲಕ ತಂಡವು ಬೃಹತ್ ಮೊತ್ತ ಪೇರಿಸಲು ನೆರವಾದರು. ಉಳಿದಂತೆ ಮೊಯಿಸಸ್ ಹೆನ್ರಿಕ್ಸ್ 2 ರನ್? ಗಳಿಸಿ ಅಜೇಯರಾಗಿ ಉಳಿದರು.
ಇನ್ನು ಟೀಂ ಇಂಡಿಯಾದ ಪರ ಮೊಹಮ್ಮದ್ ಶಮಿ, ಜಸ್ಪ್ರಿತ್ ಬೂಮ್ರಾ ಮತ್ತು ಹಾರ್ದಿಕ್ ಪಾಂಡ್ಯ ತಲಾ ಒಂದು ವಿಕೆಟ್? ಪಡೆದರು.









