ಬೆಳಗಾವಿ: ರಾಜ್ಯದಲ್ಲಿ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿರುವ ಬಿಜೆಪಿ ಸರ್ಕಾರದ ವಿರುದ್ಧ ಕನ್ನಡಪರ ಸಂಘಟನೆಗಳು ಡಿಸೆಂಬರ್ 5ಕ್ಕೆ ಕರ್ನಾಟಕ ಬಂದ್ಗೆ ಕರೆ ನೀಡಿವೆ. ಇದರ ಬೆನ್ನಲ್ಲೇ, ಮಾಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಬೆಳಗಾವಿ, ಕಾರವಾರ ನಮ್ದು ಎಂದು ಗಡಿವಿವಾದದ ಬೆಂಕಿಗೆ ತುಪ್ಪ ಸುರಿದಿದ್ದಾರೆ.
ಬೆಳಗಾವಿ, ನಿಪ್ಪಾಣಿ, ಕಾರವಾರ ಮಹಾರಾಷ್ಟ್ರಕ್ಕೆ ಸೇರಿದ್ದು, ದಿ.ಬಾಳಾಠಾಕ್ರೆ ಅವರ ಕನಸು ನನಸು ಮಾಡಬೇಕಿದೆ ಎಂದು ಹೇಳಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಶಿವಸೇನೆ ಸಂಸ್ಥಾಪಕ ದಿ. ಬಾಳಾಠಾಕ್ರೆ ಅವರ ಪುಣ್ಯಸ್ಮರಣೆ ಅಂಗವಾಗಿ ಹೇಳಿಕೆ ಬಿಡುಗಡೆ ಮಾಡಿರುವ ಎನ್ಸಿಪಿ ನಾಯಕ ಹಾಗೂ ಡಿಸಿಎಂ ಅಜಿತ್ ಪವಾರ್, ಮರಾಠಿ ಮಾತನಾಡುವವರು ಹೆಚ್ಚಾಗಿ ಇರುವ ಕರ್ನಾಟಕದ ಭಾಗವಾಗಿರುವ ಬೆಳಗಾವಿ, ನಿಪ್ಪಾಣಿ ಹಾಗೂ ಕಾರವಾರ ಸೇರಿದ ಅಖಂಡ ಮಹಾರಾಷ್ಟ್ರದ ಅಭಿವೃದ್ಧಿ ಬಾಳಾಠಾಕ್ರೆ ಅವರ ಕನಸಾಗಿತ್ತು. ಅವರ ಕನಸನ್ನು ನನಸು ಮಾಡೋಣ ಎಂದು ಕರೆ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಯಾವುದೇ ಸರ್ಕಾರ ಬಂದರೂ ಬೆಳಗಾವಿ ಗಡಿ ವಿವಾದವನ್ನು ಕೆಣಕುವುದು ಸಾಮಾನ್ಯವಾಗಿದೆ. ಈ ಹಿಂದೆ ಶಿವಸೇನೆ ಹಾಗೂ ಎಂಇಎಸ್ ಪದೇ ಪದೇ ಬೆಳಗಾವಿ ಗಡಿ ವಿವಾದ ಕೆಣಕಿ, ಕರ್ನಾಟಕದಲ್ಲಿರುವ ಮರಾಠಿಗರನ್ನು ಕನ್ನಡಿಗರ ಮೇಲೆ ಎತ್ತಿಕಟ್ಟುವ ಕೆಲಸ ಮಾಡುತ್ತಾ ಬಂದಿವೆ.
ಇದೀಗ ಮಹಾರಾಷ್ಟ್ರದಲ್ಲಿ ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದೆ. ಇಲ್ಲಿಯವರೆಗೆ ಗಡಿವಿವಾದನ್ನು ಶಿವಸೇನೆ ಕೆಣಕುತ್ತಿದ್ದರೆ, ಈ ಬಾರಿ ಎನ್ಸಿಪಿ ಮತ್ತೆ ಗಡಿವಿವಾದವನ್ನು ಕೆಣಕಿ ಕನ್ನಡ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದೆ.
ಬೆಳಗಾವಿ ಲೋಕಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಮರಾಠಿಗರ ಓಲೈಕೆಯ ತಂತ್ರವಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದಾರೆ. ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಕನ್ನಡಪರ ಸಂಘಟನೆಗಳು ಡಿ.5ರಂದು ಕರ್ನಾಟಕ ಬಂದ್ಗೆ ಕರೆ ನೀಡಿವೆ. ಮರಾಠಿಗರ ವಿರುದ್ಧ ಕನ್ನಡಿಗರ ಆಕ್ರೋಶ ಹೆಚ್ಚುತ್ತಿರುವ ಬೆನ್ನಲ್ಲೇ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಗಡಿವಿವಾದದ ಮಾತುಗಳನ್ನಾಡಿದ್ದಾರೆ. ಇದು ಮುಂದೆ ಎಲ್ಲಿಗೆ ಬಂದು ನಿಲ್ಲುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








