ಬೆಂಗಳೂರು: ಶಿರಾ ಹಾಗೂ ರಾಜರಾಜೇಶ್ವರಿ ಉಪ ಚುನಾವಣೆಯ ಮಿನಿ ಸಮರಕ್ಕೆ ಇನ್ನು ಕೇವಲ ಐದು ದಿನಗಳು ಬಾಕಿ ಇದ್ದು ಪ್ರಚಾರದ ಅಬ್ಬರ ಮತ್ತಷ್ಟು ಜೋರಾಗಿದೆ.
ಉಪಚುನಾವಣೆ ಆಖಾಡದಿಂದ ದೂರವೇ ಇದ್ದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಬಹಿರಂಗ ಪ್ರಚಾರಕ್ಕೆ ಮೂರು ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ಇಂದು ಶಿರಾ ಕ್ಷೇತ್ರದಲ್ಲಿ ರಾಜಾಹುಲಿಯಂತೆ ಗುಟುರು ಹಾಕಲಿದ್ದಾರೆ.
ಬಳಿಗ್ಗೆ 11 ಗಂಟೆಗೆ ಶಿರಾ ತಾಲೂಕಿನ ಮದಲೂರಿಗೆ ಆಗಮಿಸಲಿರುವ ಸಿಎಂ ಯಡಿಯೂರಪ್ಪ, ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್ ಗೌಡ ಪರ ಪ್ರಚಾರ ನಡೆಸಲಿದ್ದಾರೆ. ಬಳಿಕ ಮಧ್ಯಾಹ್ನ 3 ಗಂಟೆಗೆ ಶಿರಾ ಪಟ್ಟಣದಲ್ಲಿ ಆಯೋಜಿಸಿರುವ ಬಹಿರಂಗ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮತಯಾಚನೆ ಮಾಡಲಿದ್ದಾರೆ.
ಮತ್ತೊಂದೆಡೆ ದಳಪತಿಗಳ ಮತಬೇಟೆ ಇಂದೂ ಕೂಡ ಶಿರಾ ಕ್ಷೇತ್ರದಲ್ಲಿ ಮುಂದುವರೆಯಲಿದೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಸಂಸದ ಪ್ರಜ್ವಲ್ ರೇವಣ್ಣ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಪರ ಶಿರಾದಲ್ಲಿ ಪ್ರಚಾರ ನಡೆಸಲಿದ್ದಾರೆ.
ಆರ್.ಆರ್ ನಗರಕ್ಕೆ ದಿನಪೂರ್ತಿ `ಚಕ್ರವರ್ತಿ’ ರೋಡ್‍ಶೋ
ತೀವ್ರ ಜಿದ್ದಾಜಿದ್ದಿನ ಕಣವಾಗಿರುವ ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಡಿ-ಬಾಸ್ ಖ್ಯಾತಿಯ ನಟ ದರ್ಶನ್ ಅವರು ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ರೋಡ್ ಶೋ ನಡೆಸಿ ಧೂಳೆಬ್ಬಿಸಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ಯಶವಂತಪುರದಿಂದ ರೋಡ್ ಶೋ ಆರಂಭಿಸಿ ರಾತ್ರಿ 8 ಗಂಟೆಗೆ ಆರ್.ಆರ್ ನಗರದಲ್ಲಿ ಕೊನೆಯಾಗಲಿದೆ.
ಯಶವಂತಪುರ ರೈಲ್ವೆ ನಿಲ್ದಾಣದಿಂದ ಪ್ರಾರಂಭವಾಗಲಿರುವ ದರ್ಶನ್‍ರ ರೋಡ್ ಶೋ, ಜೆ.ಪಿ ಪಾರ್ಕ್, ಹೆಚ್‍ಎಂಟಿ ವಾರ್ಡ್, ಪೀಣ್ಯ, ಜಾಲಹಳ್ಳಿ, ಗೋರಗುಂಟೆ ಪಾಳ್ಯದಲ್ಲಿ ಬಿರುಸಿನ ಮತಬೇಟೆ ನಡೆಯಲಿದೆ.
ಮಧ್ಯಾಹ್ನ ಭೋಜನದ ನಂತರ ಲಕ್ಷ್ಮಿದೇವಿ ನಗರ, ಲಗ್ಗೆರೆ, ಕೊಟ್ಟಿಗೆಪಾಳ್ಯ, ಪೈಪ್‍ಲೈನ್, ಸುಂಕದಕಟ್ಟೆ, ಬಿಡಿಎ ಕಾಂಪ್ಲೆಕ್ಸ್, ಜ್ಞಾನಭಾರತಿ, ಕೆಂಗುಂಟೆ ಮಾರ್ಗವಾಗಿ ತೆರಳಿ ರಾತ್ರಿ 8 ಗಂಟೆ ಹೊತ್ತಿಗೆ ಆರ್.ಆರ್ ನಗರದಲ್ಲಿ ರೋಡ್ ಶೋ ಕೊನೆಗೊಳಿಸಲಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel