ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಆಪ್ತ ಹಾಗೂ ರಾಜಕೀಯ ಕಾರ್ಯದರ್ಶಿ ಎನ್.ಆರ್ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಕಳೆದ ರಾತ್ರಿ ಸದಾಶಿವ ನಗರದ ಮನೆಯಲ್ಲಿಯೇ ಹೆಚ್ಚು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಿದ್ದು, ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
.
ತೀವ್ರ ಚಿಂತಾಜನಕ ಸ್ಥಿತಿಯಲ್ಲಿದ್ದ ಎನ್.ಆರ್ ಸಂತೋಷ್, ಇಂದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ ಸಿಎಂ ಯಡಿಯೂರಪ್ಪ ಬೆಳಿಗ್ಗೆಯೇ ರಾಮಯ್ಯ ಆಸ್ಪತ್ರೆಗೆ ತೆರಳಿ ಸಂತೋಷ್ ಆರೋಗ್ಯ ವಿಚಾರಿಸಿದರು. ನಂತರ ಮಾತನಾಡಿದ ಅವರು, ಸಂತೋಷ್ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಜೀವಕ್ಕೆ ಯಾವುದೇ ಅಪಾಯವಿಲ್ಲ. ನನ್ನ ಜತೆಗೂ ಮಾತನಾಡಿದ್ದಾನೆ, ನಾನು ಧೈರ್ಯ ಹೇಳಿದ್ದೇನೆ ಎಂದು ತಿಳಿಸಿದರು.
ರಾಜಕೀಯ ಒತ್ತಡದಿಂದ ಆತ್ಮಹತ್ಯೆ ಯತ್ನ: ಪತ್ನಿ ಜಾಹ್ನವಿ
ನನ್ನ ಪತಿ, ನಾವು ಚೆನ್ನಾಗಿಯೇ ಇದ್ದೇವೆ. ನಮ್ಮ ದಾಂಪತ್ಯದಲ್ಲಿ ಯಾವುದೇ ಬಿರುಕು ಇಲ್ಲ. ಯಾರೋ ಕೆಲವರು ಕೌಟುಂಬಿಕ ಕಲಹದಿಂದ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ ಎಂದು ಸಂತೋಷ್ ಪತ್ನಿ ಜಾಹ್ನವಿ ಸ್ಪಷ್ಟಪಡಿಸಿದ್ದಾರೆ.
ಕೆಲ ದಿನಗಳಿಂದ ರಾಜಕೀಯ ಒತ್ತಡದಿಂದ ಬಳಲುತ್ತಿದ್ದ ಎನ್.ಆರ್ ಸಂತೋಷ್ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಬೇಸರ ಹಾಗೂ ಒತ್ತಡದಲ್ಲಿದ್ದಾಗ ಹೆಚ್ಚು ಪುಸ್ತಕ ಓದುತ್ತಿದ್ದರು. ನಿನ್ನೆಯೂ ಸಹ ಹೊರಗಡೆ ಹೋಗಿ ಬಂದವರು ಪುಸ್ತಕ ಓದಲು ಕುಳಿತಿದ್ದರು. ಯಾವಾಗಲೂ ನಿದ್ರೆ ಮಾತ್ರೆ ಸೇವಿಸಿದ್ದರು. ಆದ್ರೆ ನಿನ್ನೆ ಹೆಚ್ಚು ನಿದ್ರೆ ಮಾತ್ರೆ ಸೇವಿಸಿದ್ದಾರೆಂದು ಗೊತ್ತಾಗಲಿಲ್ಲ. ಹೀಗಾಗಿ ರಾಜಕೀಯ ಒತ್ತಡವೇ ಆತ್ಮಹತ್ಯೆ ಯತ್ನಕ್ಕೆ ಕಾರಣವಿರಬಹುದು ಎಂದು ಪತ್ನಿ ಜಾಹ್ನವಿ ಶಂಕೆ ವ್ಯಕ್ತಪಡಿಸಿದ್ದಾರೆ.
ರಾಜೀನಾಮೆ ಸೂಚಿಸಿದ್ದೇ ಕಾರಣವಾಯ್ತಾ..?
ಕಳೆದ ಮೇ.28ರಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ ಎನ್.ಆರ್ ಸಂತೋಷ್ಗೆ ಇತ್ತೀಚೆಗೆ ಒತ್ತಡ ಹೆಚ್ಚಾಗಿತ್ತು ಎನ್ನಲಾಗಿದೆ. ಯಡಿಯೂರಪ್ಪ ಅವರ ಆಗುಹೋಗುಗಳನ್ನು ಸಂಪೂರ್ಣವಾಗಿ ಬಲ್ಲವರಾಗಿದ್ದ ಸಂತೋಷ್ಗೆ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ಕೊಡುವಂತೆ ಒತ್ತಡ ಹೆಚ್ಚಾಗಿತ್ತು ಎಂಬ ವದಂತಿಗಳು ಹರಿದಾಡುತ್ತಿವೆ. ರಾಜೀನಾಮೆ ಕೊಡುವಂತೆ ಯಾರು ಒತ್ತಡ ಹಾಕಿದ್ದರು ಎಂಬುದು ಗೊತ್ತಿಲ್ಲ. ಆದರೆ, ಈ ಒತ್ತಡದಿಂದಲೇ ಆತ್ಮಹತ್ಯೆಗೆ ಯತ್ನಿಸಿದ್ದಾರಾ ಎನ್ನಲಾಗುತ್ತಿದೆ.
ಯಾರು ಈ ಎನ್.ಆರ್ ಸಂತೋಷ್..!
ಎನ್.ಆರ್ ಸಂತೋಷ್ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಆಪ್ತ ಸಹಾಯಕರಾಗಿ, ಅವರ ಆಗುಹೋಗುಗಳನ್ನು ಚಾಚೂತಪ್ಪದೆ ಮಾಡುತ್ತಿದ್ದರು. ಯಡಿಯೂರಪ್ಪ ಬೆಳಿಗ್ಗೆ ಎದ್ದ ಮೇಲೆ ಇಂದ ರಾತ್ರಿ ಮಲಗುವ ತನಕ ಅವರ ಸಂಪೂರ್ಣ ಕಾಳಜಿ ವಹಿಸುತ್ತಿದ್ದವರು ಸಂತೋಷ್.
ತುಂಬಾ ನಂಬಿಗಸ್ತನಾಗಿದ್ದ ಎನ್.ಆರ್ ಸಂತೋಷ್ ಅವರನ್ನು ಯಡಿಯೂರಪ್ಪ ಅವರು, ಕಳೆದ ಹಲವು ವರ್ಷಗಳಿಂದ ಪಿಎ ಆಗಿ ನೇಮಕ ಮಾಡಿಕೊಂಡಿದ್ದರು. ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪತನಕ್ಕೆ ಕಾಂಗ್ರೆಸ್-ಜೆಡಿಎಸ್ ಶಾಸಕರ ಆಪರೇಷನ್ ಕಮಲಕ್ಕಾಗಿ ನಡೆಯುತ್ತಿದ್ದ ರಹಸ್ಯ ಕಾರ್ಯಾಚರಣೆಯಲ್ಲಿ ಸಂತೋಷ್ ಕೂಡ ಪ್ರಮುಖ ಪಾತ್ರವಹಿಸಿದ್ದರು.
ಅತೃಪ್ತ ಶಾಸಕರನ್ನು ಬೆಂಗಳೂರು, ಮುಂಬೈ, ಗೋವಾ ಸೇರಿದಂತೆ ರೆಸಾರ್ಟ್, ಪಂಚಾತಾರಾ ಹೋಟೆಲ್ಗಳಲ್ಲಿ ರಹಸ್ಯವಾಗಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದು, ಹಾಗೂ ಆತೃಪ್ತ ಶಾಸಕರನ್ನು ಕರೆದೊಯ್ಯಲು ವಿಶೇಷ ವಿಮಾನಗಳ ವ್ಯವಸ್ಥೆ, ರಹಸ್ಯ ಸ್ಥಳಕ್ಕೆ ಕರೆದೊಯ್ದು ಸುರಕ್ಷಿತವಾಗಿ ಬಿಡುವುದರವರೆಗಿನ ಸಂಪೂರ್ಣ ಜವಾಬ್ದಾರಿಯನ್ನು ಎನ್.ಆರ್ ಸಂತೋಷ್ ವಹಿಸಿಕೊಂಡಿದ್ದರು ಎಂದು ಕಾಂಗ್ರೆಸ್ ನಾಯಕರೇ ಅಂದು ಆರೋಪಿಸಿದ್ದರು. ಈ ಸಂಬಂಧದ ವಿಡಿಯೋ, ಫೋಟೋಗಳನ್ನು ಬಿಡುಗಡೆ ಮಾಡಿದ್ದರು.
22ನೇ ವಯಸ್ಸಿನಲ್ಲಿಯೇ ಯಡಿಯೂರಪ್ಪ ಪಿಎ ಆಗಿ ಸೇರಿಕೊಂಡಿದ್ದ ಸಂತೋಷ್, ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆ ಗ್ರಾಮದವರು. ಕೃಷಿ ಕುಟುಂಬದಿಂದ ಬಂದ ಸಂತೋಷ್, ಬೆಂಗಳೂರಿನಲ್ಲಿ ಪದವಿ ಮುಗಿಸಿದ್ದರು. 2006ರಿಂದ 2012ರವರೆಗೆ ಎಬಿವಿಪಿಯಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಕೆಲಸ ಮಾಡಿದ್ದಾರೆ.
ಅರಸೀಕೆರೆ ಕ್ಷೇತ್ರದಿಂದ ಎಂಎಲ್ಎ ಆಗಿ ಗೆಲ್ಲುವ ಕನಸು ಹೊಂದಿದ್ದ ಸಂತೋಷ್, ಹಲವು ಸಾಮಾಜಿಕ ಕೆಲಸಗಳ ಮೂಲಕ ಗುರುತಿಸಿಕೊಳ್ಳುವ ಯತ್ನ ನಡೆಸಿದ್ದರು. ಇವರ ಅರಸೀಕೆರೆ ಎಂಟ್ರಿಗೆ ಬಿಜೆಪಿಯಲ್ಲೇ ಅಪಸ್ವರ ಎದ್ದಿತ್ತು. ಸಂತೋಷ್ ಕೌಟುಂಬಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಬಿಜೆಪಿಯ ಇನ್ನೊಂದು ಬಣ ಅಪಮಾನ ಮಾಡಿತ್ತು ಎನ್ನಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel