ಬೆಂಗಳೂರು : ಇಂದಿನಿಂದ ರಾಜ್ಯದ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ. ಸ್ವಾತಂತ್ರ‍್ಯ ಹೋರಾಟಗಾರ ದೊರೆಸ್ವಾಮಿ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವಹೇಳನಕಾರಿ ಹೇಳಿಕೆಗೆ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ನಾಯಕರು ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಉಭಯ ಸದನದ ಬಾವಿಗಿಳಿಸಿದು ಪ್ರತಿಭಟನೆ ನಡೆಸಿದ್ದಾರೆ.
“ಬಿಜೆಪಿ ಶಾಸಕ ಯತ್ನಾಳ್ ಸ್ವಾತಂತ್ರ‍್ಯ ಹೋರಾಟಗಾರ ದೊರೆಸ್ವಾಮಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದು ಅಕ್ಷಮ್ಯ ಅಪರಾಧ. ಈ ಮೂಲಕ ಅವರು ದೊರೆಸ್ವಾಮಿ ಮಾತ್ರವಲ್ಲ, ಇಡೀ ಸ್ವಾತಂತ್ರ‍್ಯ ಹೋರಾಟದ ಚಳುವಳಿಯನ್ನೇ ಅವಹೇಳನ ಮಾಡಿದ್ದಾರೆ. ಹೀಗಾಗಿ ಯತ್ನಾಳ್ ತಮ್ಮ ಹೇಳಿಕೆಗೆ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಅವರನ್ನು ಶಾಸಕ ಸ್ಥಾನದಿಂದಲೇ ಪದಚ್ಯುತಗೊಳಿಸಬೇಕು. ಪಕ್ಷದಿಂದಲೇ ಉಚ್ಛಾಟನೆ ಮಾಡಬೇಕು. ಸ್ಪೀಕರ್ ತಮ್ಮ ವಿಶೇಷ ಅಧಿಕಾರವನ್ನು ಬಳಸಿ ಶಾಸಕನನ್ನು ಪದಚ್ಯುತ ಮಾಡುವ ಅವಕಾಶ ಇದೆ. ಹೀಗಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಅಸ್ತ್ರವನ್ನು ಬಳಸಬೇಕು. ಈ ಕುರಿತು ಚರ್ಚೆಗೆ ನಿಲುವಳಿ ಮಂಡಿಸಬೇಕು” ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.








