ಬೆಂಗಳೂರು : ವಲಸೆ ಕಾರ್ಮಿಕರನ್ನು ಉಚಿತವಾಗಿ ಅವರ ಊರಿಗೆ ಕಳುಹಿಸಲೆಂದು ಕಾಂಗ್ರೆಸ್ ನೀಡಿದ ಚೆಕ್ ನಕಲಿ ಎಂದು ಕಂದಾಯ ಸಚಿವ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧ್ಯಕ್ಷರು ನೀಡಿದ ಚೆಕ್ ಮೇಲೆ ದಿನೇಶ್ ಗುಂಡೂರಾವ್ ಸಹಿ ಇದೆ. ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್. ಇವರ ಒಳ ಜಗಳ ಏನಿದೆಯೋ ಗೊತ್ತಿಲ್ಲ. ಚೆಕ್ ಮೇಲೆ ಡಿಕೆಶಿವಕುಮಾರ್ ಅವರ ಸಹಿ ಇಲ್ಲ. ಹೀಗಾಗಿ ಈ ಚೆಕ್ ಕೂಡ ನಕಲಿ ಎಂದು ದೂರಿದರು. ಅಲ್ಲದೆ ಇವರಿಗೆ ಖಾತೆ ಬದಲಾವಣೆ ಮಾಡುವ ಜ್ಞಾನ ಇಲ್ಲ. ಬಸ್ ಬಿಡುವ ಬಗ್ಗೆ ನಮಗೆ ಸಲಹೆ ನೀಡುತ್ತಾರೆ ಎಂದು ಕನಕಪುರ ಬಂಡೆಗೆ ಟಾಂಗ್ ನೀಡಿದರು.
ಇದೇ ವೇಳೆ ಕಾಂಗ್ರೆಸ್ ನಾಯಕರು ಕೆಂಪೇಗೌಡ ಬಸ್ ನಿಲ್ದಾಣ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು, ನಿನ್ನೆ ಸುಮಾರು 5 ಸಾವಿರ ಮಂದಿ ಮಧ್ಯದಲ್ಲಿ ಕಾಂಗ್ರೆಸ್ ನಾಯಕರು ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ. ಯಾರಿಗಾದರೂ ಸೋಂಕು ಇದ್ದರೆ ಅನ್ನೋ ಪರಿಜ್ಞಾನವೂ ಅವರಿಗೆ ಇರಲಿಲ್ಲ. ಹೀಗಿರುವಾಗ ಬೇರೆಯವರಿಗೆ ಹೇಳುವ ನೈತಿಕತೆ ಅವರಿಗಿಲ್ಲ ಎಂದು ಗುಡುಗಿದರು. ಇನ್ನು ನಿನ್ನೆ ಮೆಜೆಸ್ಟಿಕ್ ಗೆ ಭೇಟಿ ನೀಡಿದ್ದ ಕೈ ನಾಯಕರಿಗೂ ತಪಾಸಣೆಯಾಗಬೇಕು. ಜೊತೆಗೆ ಅವರಿಗೂ ಕ್ವಾರೆಂಟೈನ್ ಮಾಡೋ ಚಾನ್ಸ್ ಬರಬಹುದು. ಈ ಬಗ್ಗೆ ಅಧಿಕಾರಿಗಳ ಜೊತೆ ಹಾಗೂ ಸಿಎಂ ಜೊತೆ ಚರ್ಚಿಸಿ ಕಾಂಗ್ರೆಸ್ ನಾಯಕರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.








