ಬೆಂಗಳೂರು : ಪಾಲಿಕೆ ಸದಸ್ಯ ಅಬ್ದುಲ್ ರಕೀಬ್ ಜಾಕೀರ್ ಮತ್ತು ಅವರ ಪಾಲುದಾರರು 18 ಕೋಟಿ ಮೌಲ್ಯದ 2 ಪಾಲಿಕೆ ಸ್ವತ್ತುಗಳನ್ನು ಕಬಳಿಸಿದ್ದಾರೆ ಎಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಜೆಪಿ ಅಧ್ಯಕ್ಷ ರಮೇಶ್ ಎನ್. ಆರ್ ಅವರು ಆರೋಪಿಸಿದ್ದಾರೆ. ಅಲ್ಲದೆ ಈ ಸಂಬಂಧ ಕ್ರಮ ತೆಗೆದುಕೊಳ್ಳುವಂತೆ ದಾಖಲೆ ಸಮೇತವಾಗಿ ಬೆಂಗಳೂರು ಪೊಲೀಸ್ ಮಹಾನಿರ್ದೇಶಕರಿಗೆ ರಮೇಶ್ ಅವರು ದೂರು ನೀಡಿದ್ದಾರೆ.
ಅಬ್ದುಲ್ ರಕೀಬ್ ಜಾಕೀರ್ ಮತ್ತು ಅವರ ಪಾಲುದಾರರು ಪುಲಿಕೇಶಿನಗರ ವಾರ್ಡ್ ವ್ಯಾಪ್ತಿಯ ಬಂಬೂ ಬಜಾರ್ ರಸ್ತೆಯಲ್ಲಿರುವ ಸುಮಾರು 18 ಕೋಟಿಗೂ ಹೆಚ್ಚು ಮೌಲ್ಯದ 2 ಪಾಲಿಕೆಯ ಸ್ವತ್ತುಗಳನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಬಳಿಸಿದ್ದಾರೆ. ಅಲ್ಲದೆ ಅಲ್ಲಿ ನಿಯಮಬಾಹಿತವಾಗಿ ವಸತಿ ಸಂಕೀರ್ಣ ಮತ್ತು ಕಲ್ಯಾಣ ಮಂಟಪವನ್ನು ನಿರ್ಮಿಸುತ್ತಿದ್ದಾರೆ.
ಇದಕ್ಕೆ ಅಧಿಕಾರಿಗಳೂ ಸಾಥ್ ನೀಡಿದ್ದಾರೆ ಎಂದು ಆರೋಪಿಸಿರುವ ರಮೇಶ್ ಅವರು, ನಕಲಿ ಹೆಸರುಗಳಿಗೆ ಕಾನೂನುಬಾಹಿತವಾಗಿ ಖಾತಾ ಮಾಡಿಕೊಟ್ಟಿರುವ ಪುಲಿಕೇಶಿನಗರ ಉಪ ವಿಭಾಗದ ಕಂದಾಯ ಇಲಾಖೆಯ ಅಧಿಕಾರಿಗಳ ಹಾಗೂ ಪಾಲಿಕೆ ಸ್ವತ್ತನ್ನು ನಿಯಮಬಾಹಿರವಾಗಿ ಮಾರಾಟ ಮಾಡಿರುವ ನಿವೃತ್ತ ಐಎಎಸ್ ಅಧಿಕಾರಿ ಜಯರಾಂ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.