ವಿಶ್ವದೆಲ್ಲೆಡೆ ಕೊರೋನಾ ಮಹಾಮಾರಿಯಂತೆ ಕಾಡುತ್ತಿದೆ. ದಿನದಿಂದ ದಿನಕ್ಕೆ ಕೊರೋನಾ ವೈರಸ್ ಮನುಕುಲವನ್ನು ಬೆದರಿಸುತ್ತಿದೆ. ಈ ಮಹಾಮಾರಿಯಿಂದ ಜೀವ ಉಳಿದ್ರೆ ಸಾಕು ಅನ್ನೋ ಸ್ಥಿತಿ ಬಂದೋದಗಿದೆ. ಆದ್ರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಮಾತ್ರ ಐಪಿಎಲ್ನದ್ದೇ ಚಿಂತೆ. ಐಪಿಎಲ್ ಎಂಬ ಚಿನ್ನ ಕೋಳಿ ಬಿಸಿಸಿಐನ ಚೊಕ್ಕಸವನ್ನು ತುಂಬುವಂತೆ ಮಾಡುತ್ತಿದೆ. ಹೀಗಾಗಿ ಹೇಗಾದ್ರೂ ಮಾಡಿ ಈ ಬಾರಿಯ ಐಪಿಎಲ್ ಟೂರ್ನಿಯನ್ನು ಸಂಘಟಿಸಬೇಕು ಅನ್ನೋ ಉಮೇದಿನಲ್ಲಿದೆ ಬಿಸಿಸಿಐ.
ಈಗಾಗಲೇ ಅಕ್ಟೋಬರ್ -ನವೆಂಬರ್ ನಲ್ಲಿ ನಡೆಯಬೇಕಿದ್ದ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿ 2022ಕ್ಕೆ ಮುಂದೂಡುವ ಸಾಧ್ಯತೆ ಇದೆ. ಯಾವುದಕ್ಕೂ ಮೇ 28ರಂದು ನಡೆಯಲಿರುವ ಐಸಿಸಿ ಸಭೆಯಲ್ಲಿ ಈ ಬಾರಿಯ ಟಿ-ಟ್ವೆಂಟಿ ವಿಶ್ವಕಪ್ನ ಭವಿಷ್ಯ ನಿರ್ಧಾರವಾಗಲಿದೆ.
ಒಂದು ವೇಳೆ, ವಿಶ್ವಕಪ್ ಟೂರ್ನಿ ಮುಂದೂಡಿದ್ರೆ ಅದೇ ಸಮಯದಲ್ಲಿ ಐಪಿಎಲ್ ಟೂರ್ನಿಯನ್ನು ಸಂಘಟಿಸುವ ಯೋಜನೆಯೊಂದನ್ನು ಬಿಸಿಸಿಐ ಹಾಕೊಂಡಿದೆ. ಮಳೆಗಾಲ ಮುಗಿದ ನಂತರ ಐಪಿಎಲ್ ಟೂರ್ನಿಯನ್ನು ನಡೆಸುವ ಚಿಂತನೆಯೊಂದು ಬಿಸಿಸಿಐ ಮುಂದಿದೆ. ಹಾಗಂತ ಸರ್ಕಾರದ ಆದೇಶಗಳನ್ನು ದಿಕ್ಕರಿಸಿಕೊಂಡು ಈ ಟೂರ್ನಿಯನ್ನು ಖಂಡಿತವಾಗಿಯೂ ನಡೆಸುವುದಿಲ್ಲ. ಸರ್ಕಾರದ ಆದೇಶ, ಮಾರ್ಗಸೂಚಿಗಳನ್ನು ಪರಿಪಾಲಿಸಿಕೊಂಡು ಟೂರ್ನಿಯನ್ನು ಸಂಘಟಿಸಿದ್ರೂ ಅಚ್ಚರಿ ಏನಿಲ್ಲ.
ಒಂದು ವೇಳೆ ಕೊರೋನಾ ವೈರಸ್ನ ಅಟ್ಟಹಾಸ ಕಡಿಮೆಯಾಗದಿದ್ರೆ ಈ ವರ್ಷದ ಐಪಿಎಲ್ ಟೂರ್ನಿಯೂ ಮುಂದೂಡುವುದು ಪಕ್ಕಾ. ಹಾಗೊಂದು ವೇಳೆ ಕೊರೋನಾ ವೈರಸ್ ಸೋಂಕು ಕಡಿಮೆಯಾದ್ರೆ ಪ್ರೇಕ್ಷಕರಿಲ್ಲದೆ ಆಯೋಜಿಸುವ ಲೆಕ್ಕಚಾರವೂ ಇದೆ. ಹಾಗೇ ವಿದೇಶಿ ಆಟಗಾರರು ಮತ್ತು ಭಾರತೀಯ ಆಟಗಾರರು ಸೇರಿದಂತೆ ಎಲ್ಲರನ್ನು 14 ದಿನಗಳ ಕಾಲ ಕ್ವಾರಂಟೈನ್ ಮಾಡಿ ಆ ನಂತರ ಪಂದ್ಯಗಳನ್ನಾಡಿಸುವ ಸಾದ್ಯತೆಯೂ ಇದೆ.
ಒಟ್ಟಿನಲ್ಲಿ ಬಿಸಿಸಿಐಗೆ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ನಡೆಯದಿರುವುದು ದೊಡ್ಡ ಚಿಂತೆಯಾಗಿ ಪರಿಣಮಿಸಿದೆ. ಆದ್ರೆ ಸದ್ಯದ ಸ್ಥಿತಿ ನೋಡಿದ್ರೆ ಕೊರೋನಾ ವೈರಸ್ ದಿನದಿಂದ ದಿನಕ್ಕೆ ಮನುಕುಲಕ್ಕೆ ಅಪಾಯವನ್ನು ತಂದೊಡ್ಡುತ್ತಿದೆ. ಈಗಾಗಲೇ ಸುಮಾರು ಎರಡು ತಿಂಗಳುಗಳ ಕಾಲ ಭಾರತದಲ್ಲಿ ಲಾಕ್ ಡೌನ್ ಮಾಡಿದ್ರೂ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹೀಗಾಗಿ ಐಪಿಎಲ್ ಬಿಡಿ, ಜನರ ಮುಂದಿನ ಭವಿಷ್ಯ ಏನು ಎಂಬುದೇ ಯಾರಿಗೂ ಗೊತ್ತಾಗುತ್ತಿಲ್ಲ.