ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸಾಮಗ್ರಿಗಳ ಖರೀದಿಯಲ್ಲಿ ಭಾರಿ ಹಗರಣ ನಡೆದಿದೆ ಎಂದು ಪದೇ ಪದೇ ಆರೋಪಿಸುತ್ತಿರುವ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಇಂದು ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೋಂಕಿನ ಜತೆಗೆ ಸರ್ಕಾರದ ಭ್ರಷ್ಟಾಚಾರವೂ ನಿಯಂತ್ರಣ ತಪ್ಪಿ ಹೆಚ್ಚುತ್ತಿದೆ. ಮೂರುಪಟ್ಟು ಹೆಚ್ಚು ದರ ಕೊಟ್ಟು ವೆಂಟಿಲೇಟರ್ ಖರೀದಿ ಮಾಡಿದ ಕರ್ಮಕಾಂಡವನ್ನು ಪ್ರತಿಯೊಂದು ವರದಿ ಮಾಡಿದೆ.
ಜನರ ತೆರಿಗೆ ಹಣ ಲೂಟಿಯಾಗುವುದನ್ನು ನೋಡುತ್ತಾ ಸುಮ್ಮನಿದ್ದು, ಸರ್ಕಾರಕ್ಕೆ ಸಲಹೆ ನೀಡಲೇ ಎಂದು ಟ್ವಿಟರ್‍ನಲ್ಲಿ ಪ್ರಶ್ನಿಸಿರುವ ಸಿದ್ದರಾಮಯ್ಯ, ಕೊರೊನಾ ಸಂಬಂಧಿತ ಭ್ರಷ್ಟಾಚಾರದ ಆರೋಪಕ್ಕೆ ದಾಖಲೆ ಸಹಿತ ಉತ್ತರಿಸಲಾಗದೆ ಬಿಜೆಪಿ ಸರ್ಕಾರ, ಎನ್.ಆರ್ ರಮೇಶ್ ಅವರಿಂದ ಸುಳ್ಳು ಆರೋಪಗಳನ್ನು ಮಾಡಿಸುತ್ತಿದೆ.
ಆ ವ್ಯಕ್ತಿ ಮಾಡಿರುವ ಎಲ್ಲ ಆರೋಪಗಳನ್ನು ಲೋಕಾಯುಕ್ತ ಮತ್ತು ಎಸಿಬಿ ತನಿಖೆ ನಡೆಸಿ ತಿರಸ್ಕರಿಸಿದೆ. ಈ ರೀತಿ ನಮ್ಮ ಬಾಯಿ ಮುಚ್ಚಲು ಸಾಧ್ಯ ಇಲ್ಲ ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.
ಕೊರೊನಾ ಸಾಮಗ್ರಿ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಲೆಕ್ಕಕೊಡಿ ಅಭಿಯಾನ ಆರಂಭಿಸಿರುವ ಸಿದ್ದರಾಮಯ್ಯ ಸುಳ್ಳಿನ ಕತೆ ಕಟ್ಟುತ್ತಿದ್ದಾರೆ ಎಂದು ಸಚಿವರಾದ ಆರ್.ಅಶೋಕ್, ಶ್ರೀರಾಮುಲು ಸ್ಪಷ್ಟನೆ ನೀಡಿದ್ದಾರೆ.