ಚಿಕ್ಕಮಗಳೂರು : ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿರುವ ಕಾಂಗ್ರೆಸ್ ನಾಯಕರ ವಿರುದ್ಧ ಸಚಿವ ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಭೂತದ ಬಾಯಲ್ಲಿ ಭಗವದ್ಗೀತೆ ಬರುವುದಕ್ಕೂ ಭ್ರಷ್ಟಾಚಾರದ ಬಗ್ಗೆ ಡಿಕೆಶಿ ಮಾತನಾಡುವುದಕ್ಕೂ ವ್ಯತ್ಯಾಸವಿಲ್ಲ. ಡಿ.ಕೆ.ಶಿವಕುಮಾರ್ ತಮ್ಮ ಪ್ರಾಮಾಣಿಕತೆಯ ಬಗ್ಗೆ ಆತ್ಮಸಾಕ್ಷಿಗೆ ಪ್ರಶ್ನೆ ಮಾಡಿಕೊಳ್ಳಲಿ ಎಂದು ಕುಟುಕಿದರು.
ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದ ರವಿ, ಭ್ರಷ್ಟಾಚಾರದ ಬಗ್ಗೆ ಸಿದ್ದರಾಮಯ್ಯ ಮಾತನಾಡುತ್ತಾರೆ. ರಿ ಡ್ಯೂವ್ ಎಂಬ ಹೊಸ ಪರಿಭಾಷೆಯನ್ನ ಯಾರು ಹುಟ್ಟಿಹಾಕಿದ್ದು ಸಿದ್ದರಾಮಯ್ಯನವರು. ಡಿನೋಟಿಫೈನಲ್ಲಿ ರಿ ಡ್ಯೂವ್ ಹುಟ್ಟು ಹಾಕಿ 600 ಎಕರೆ ಡಿನೋಟಿಫೈ ಮಾಡಿದ್ದರು. ಇದಕ್ಕೆ ಉತ್ತರ ಸಿಗಲಲೇ ಇಲ್ಲ, ಇವತ್ತು ಪ್ರಶ್ನೆ ಕೇಳ್ತಿದ್ದಾರೆ, ಉತ್ತರ ಹೇಳಬೇಕಾದವರು ಅವರೇ ಎಂದು ಆರೋಪಿಸಿದರು.
ಅಲ್ಲದೆ ಕೋವಿಡ್ ವಿಚಾರದಲ್ಲಿ ಭ್ರಷ್ಟಾಚಾರದ ಆಲೋಚನೆಯೂ ತಪ್ಪು ಎಂದ ಸಿ.ಟಿ ರವಿ, ಆಧಾರ ಇದ್ದರೆ ಸಿದ್ದರಾಮಯ್ಯ ಕಂಪ್ಲೇಂಟ್ ಮಾಡಲಿ. ಆಧಾರ ಇದ್ದರೆ ಕೋರ್ಟ್ ಹಾಗೂ ಲೋಕಾಯುಕ್ತಕ್ಕೆ ಸಲ್ಲಿಸಲಿ. ಆಧಾರ ಇಲ್ಲದೆ ಪ್ರಶ್ನೆ ಮಾಡುವುದು ತಪ್ಪು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಗರಂ ಆದರು.