ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರ ಪತನಗೊಂಡಿದೆ. ಇಂದು ಸಂಜೆ 5 ಗಂಟೆ ಒಳಗಾಗಿ ಕಮಲ್ ನಾಥ್ ಅವರಿಗೆ ಬಹುಮತ ಸಾಬೀತು ಪಡಿಸಲು ಸುಪ್ರೀಂಕೋರ್ಟ್ ಸೂಚಿಸಿತ್ತು. ಹಾಗಾಗಿ ಮುಖ್ಯಮಂತ್ರಿ ಕಮಲ್ ನಾಥ್ ಇಂದು ಮಧ್ಯ್ಹಾನ 2 ಗಂಟೆಗೆ ವಿಶ್ವಾಸ ಮತಯಾಚನೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದರು. ಆದರೆ ಇಂದು 16 ರೆಬಲ್ ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಎನ್ಪಿ ಪ್ರಜಾಪತಿ ಅಂಗೀಕರಿಸಿದ್ದರು. ಜೊತೆಗೆ 6 ಸಚಿವರ ರಾಜೀನಾಮೆ ಸಹ ಅಂಗೀಕಾರವಾಗಿದೆ. ಹಾಗಾಗಿ ಕಾಂಗ್ರೆಸ್ ಸರ್ಕಾರ ಬಹುಮತ ಕಳೆದುಕೊಂಡಿತ್ತು. ಆದ್ದರಿಂದ ಸಿಎಂ ಕಮಲ್ನಾಥ್ ವಿಶ್ವಾಸ ಮತಯಾಚನೆ ಮುನ್ನವೇ ರಾಜೀನಾಮೆ ನೀಡಿದ್ದಾರೆ. ರೆಬಲ್ ಶಾಸಕರ ರಾಜೀನಾಮೆ ಅಂಗೀಕಾರದಿಂದಾಗಿ ಕಾಂಗ್ರೆಸ್ ಸರ್ಕಾರ ಉಳಿಸಿಕೊಳ್ಳುವ ಎಲ್ಲಾ ಹೋರಾಟಗಳು ಅಂತ್ಯವಾಗಿದೆ. ಹೀಗಾಗಿ ಇವತ್ತು ವಿಶ್ವಾಸ ಮತಯಾಚನೆಗೂ ಮೊದಲೆ ಸಿಎಂ ಕಮಲ್ನಾಥ್ ರಾಜೀನಾಮೆ ನೀಡಿದ್ದಾರೆ.
ಬಿಜೆಪಿ ವಿರುದ್ಧ ವಾಗ್ದಾಳಿ
ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಮಲ್ ನಾಥ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಧಿಕಾರಕ್ಕೆ 15 ತಿಂಗಳಲ್ಲಿ ರಾಜ್ಯದ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ. ಈ 15 ತಿಂಗಳಲ್ಲಿ ನಾನು ಏನು ತಪ್ಪು ಮಾಡಿದ್ದೇನೆ? ನಮ್ಮ ಸರ್ಕಾರದ ತಪ್ಪಾದರೂ ಏನು? ನಾನು ಯುಪಿಏ ಸರ್ಕಾರದಲ್ಲಿ ಮಂತ್ರಿಯಾಗಿದ್ದಾಗಲೂ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ನಮ್ಮ ಸರ್ಕಾರ ಬಂದಾಗಿನಿಂದ ಸರ್ಕಾರವನ್ನು ಉರುಳಿಸುವ ತಂತ್ರವನ್ನು ಬಿಜೆಪಿ ರೂಪಿಸಿತ್ತು. ಅದಕ್ಕಾಗಿ ನಮ್ಮ ಶಾಸಕರನ್ನು ಬೆಂಗಳೂರಿನ ರೆಸಾರ್ಟ್ ಒಂದರಲ್ಲಿ ಬಂಧಿಸಿ ಇಡಲಾಗಿದೆ. ಕೋಟಿಗಟ್ಟಲೆ ಹಣ ಖರ್ಚು ಮಾಡಿ ಬಿಜೆಪಿ ಆಡಿದ ಆಟವನ್ನು ಇಡೀ ದೇಶವೇ ನೋಡಿದೆ. ಮಧ್ಯಪ್ರದೇಶದ ಜನ ಈ ದ್ರೋಹಿಗಳನ್ನು ಎಂದೂ ಕ್ಷಮಿಸಲ್ಲ ಎಂದು ಹೇಳಿದ್ದಾರೆ.