ಸಂಕಷ್ಟದಲ್ಲಿ ಗಾಂಧಿ – ನೆಹರು ಕುಟುಂಬದ ಟ್ರಸ್ಟ್
ಹೊಸದಿಲ್ಲಿ, ಜುಲೈ 27: ಮಹತ್ವದ ಬೆಳವಣಿಗೆಯೊಂದರಲ್ಲಿ ಹರ್ಯಾಣ ಸರಕಾರ ಗಾಂಧಿ ಮತ್ತು ನೆಹರು ಮನೆತನದ ಅಸ್ತಿ ಒಡೆತನದ ತನಿಖೆಗೆ ಆದೇಶ ನೀಡಿದೆ. ರಾಜ್ಯ ಪ್ರಧಾನ ಕಾರ್ಯದರ್ಶಿ ಕೇಶನಿ ಆನಂದ್ ಅರೋರಾ, ಹರ್ಯಾಣ ನಗರ ಸ್ಥಳೀಯ ಸಂಸ್ಥೆಗಳ ಇಲಾಖೆಗಳಿಗೆ ನೆಹರು ಗಾಂಧಿ ಒಡೆತನಕ್ಕೆ ಸಂಬಂಧಿಸಿದ ಆಸ್ತಿಗಳ ತನಿಖೆಗೆ ಆದೇಶ ನೀಡಿದ್ದಾರೆ.
ಕೆಲ ದಿನಗಳ ಹಿಂದೆ ಗೃಹ ಸಚಿವಾಲಯ ನೆಹರು-ಗಾಂಧಿ ಕುಟುಂಬ ನಡೆಸುತ್ತಿರುವ ರಾಜೀವ್ ಗಾಂಧಿ ಫೌಂಡೇಶನ್, ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ಮತ್ತು ಇಂದಿರಾ ಗಾಂಧಿ ಮೆಮೋರಿಯಲ್ ಟ್ರಸ್ಟ್ ನಡೆಸುತ್ತಿರುವ ವ್ಯವಹಾರದ ತನಿಖೆಗೆ ತನಿಖಾ ತಂಡವನ್ನು ರಚಿಸಿತ್ತು.

ಇದೀಗ 2004 ರಿಂದ 2014 ಅವಧಿಯಲ್ಲಿ, ಕಾಂಗ್ರೆಸ್ ನ ಭೂಪೇಂದ್ರ ಸಿಂಗ್ ಅಧಿಕಾರ ಅವಧಿಯಲ್ಲಿ ಗಾಂಧಿ ಟ್ರಸ್ಟ್ ಗಳ ಮೂಲಕ ನಡೆದಿದೆ ಎನ್ನಲಾದ ಅಸ್ತಿ ಅವ್ಯವಹಾರದ ತನಿಖೆಗೆ ಹರ್ಯಾಣ ಸರಕಾರ ಆದೇಶ ನೀಡಿದ್ದಲ್ಲದೆ ನೆಹರು-ಗಾಂಧಿ ಪರಿವಾರದ ಸಂಪೂರ್ಣ ಅಸ್ತಿ ವಿವರ ಮತ್ತು ಇತರ ಸ್ವತ್ತುಗಳ ಸಮಗ್ರ ಮಾಹಿತಿ ಕಲೆಹಾಕಲು ಆದೇಶ ನೀಡಿದೆ.
ಈಗಾಗಲೇ ಗುರುಗ್ರಾಮದಲ್ಲಿ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ನೀಡಿದ ಅಸ್ತಿ ಮೇಲೆ ನಿಗಾ ಇಡಲಾಗಿದ್ದು ಈ ಜಾಗವನ್ನು ಅತಿ ಕಡಿಮೆ ದರದಲ್ಲಿ ನೀಡಲಾಗಿತ್ತು ಎನ್ನಲಾಗಿದೆ.
ಇತ್ತೀಚಿನ ಭಾರತ ಚೀನಾ ಗಡಿ ವಿವಾದ ಸಂದರ್ಭದಲ್ಲಿ ಎರಡು ಪಕ್ಷಗಳು ಮಾತಿನ ವಾಕ್ ಸಮರದಲ್ಲಿ ತೊಡಗಿದ್ದವು. ಆದಾಗ್ಯೂ ನೆಹರು ಗಾಂಧಿ ಪರಿವಾರದ ಟ್ರಸ್ಟ್ ಗಳಿಗೆ ಚೀನಾದಿಂದ ನೇರವಾಗಿ ರವಾನೆಯಾದ ಹಣಕಾಸಿನ ವ್ಯವಹಾರ ಅನೇಕ ಪ್ರಶ್ನೆಯನ್ನು ಹುಟ್ಟು ಹಾಕಿತ್ತು. ಇದೀಗ ಕೇಂದ್ರ ಸರಕಾರದ ಆದೇಶದ ಮೇರೆಗೆ ಹರ್ಯಾಣ ಸರಕಾರ ಗಾಂಧಿ ನೆಹರು ಕುಟುಂಬದ ಟ್ರಸ್ಟ್ ತನಿಖೆಗೆ ಆದೇಶ ನೀಡಿದೆ.








