ಅಮೆರಿಕ – ಮೊದಲ ವಿಶ್ವಯುದ್ಧದ ಸಾವನ್ನು ಮೀರಿಸಿದೆ ಕೊರೊನಾ
ವಾಷಿಂಗ್ಟನ್, ಜೂ. 19: ಚೀನಾದಿಂದ ಉಗಮವಾದ ಕೊರೊನಾ ವೈರಸ್ ವಿಶ್ವದ ದೊಡ್ಡಣ್ಣ ಅಮೆರಿಕದ ವ್ಯವಸ್ಥೆಯನ್ನು ಬುಡಮೇಲು ಮಾಡಿದ್ದು, ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 1.20 ಲಕ್ಷ ಹಾಗೂ ರೋಗ ಪೀಡಿತರ ಸಂಖ್ಯೆ 22.09ಲಕ್ಷ ಸನಿಹದಲ್ಲಿದೆ.

ಇದು ಅಮೆರಿಕದಲ್ಲಿ ಮೊದಲ ವಿಶ್ವ ಮಹಾಯುದ್ಧದಲ್ಲಿ ಅಸುನೀಗಿದ ಅಮೆರಿಕದ ಯೋಧರಿಗಿಂತ ಹೆಚ್ಚು ಎಂಬ ಆಘಾತಕಾರಿ ಮಾಹಿತಿಯೊಂದು ಬಯಲಾಗಿದೆ. ಮೊದಲ ವಿಶ್ವ ಮಹಾಯುದ್ಧದಲ್ಲಿ ಸುಮಾರು 1.18 ಲಕ್ಷ ಸೈನಿಕರು ಸಾವಿಗೀಡಾಗಿದ್ದರೆ, ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1.19 ಲಕ್ಷಕ್ಕೂ ಹೆಚ್ಚು. ಕಳೆದ 24 ಗಂಟೆಗಳ ಅವಧಿಯಲ್ಲಿ 740 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದರೆ, 23,350 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ವಿಶ್ವದ ಬಲಿಷ್ಟ ರಾಷ್ಟ್ರ ಅಮೆರಿಕವನ್ನೇ ಕಂಗೆಡಿಸಿರುವ ಕೊರೊನಾ ಸೋಂಕಿನಿಂದ ರಾಷ್ಟ್ರದಲ್ಲಿ ವಿಶ್ವದಲ್ಲೇ ಅತ್ಯಂತ ಹೆಚ್ಚು ಸಾವು ನೋವು ಸಂಭವಿಸಿದೆ. ಅಮೆರಿಕದ ಅರಿಜೋನ, ಫ್ಲಾರಿಡಾ, ಓಕ್ಲಹಾಮಾ, ಅರೇಗಾನ್, ಟೆಕ್ಸಸ್ ಪ್ರಾಂತ್ಯಗಳಲ್ಲಿ ದಾಖಲೆ ಪ್ರಮಾಣದಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.

ವಿಶ್ವದ ಅತಿ ಹೆಚ್ಚು ಕೊರೊನಾ ಸೋಂಕಿತ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ ಮೊದಲನೇ ಸ್ಥಾನದಲ್ಲಿದ್ದರೆ, ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ. ಬಳಿಕ ರಷ್ಯಾ, ಭಾರತ ಮತ್ತು ಬ್ರಿಟನ್ ದೇಶಗಳಿವೆ.








