ನೆಟ್ಸ್ ನಲ್ಲಿ ಅಭ್ಯಾಸ ಶುರು ಮಾಡಿರುವ ಕೆ.ಎಲ್. ರಾಹುಲ್
ಇನ್ನೇನು ಐಪಿಎಲ್ ಶುರುವಾಗುತ್ತಿದೆ. ಬಹುತೇಕ ಅಡೆತಡೆಗಳಿಗೆ ಪರಿಹಾರ ಸಿಕ್ತಾ ಇವೆ. ಹೀಗಾಗಿ ಫ್ರಾಂಚೈಸಿಗಳು ಭರದ ಸಿದ್ಧತೆ ಮಾಡಿಕೊಳ್ಳುತ್ತಿವೆ. ಹಾಗೇ ಆಟಗಾರರು ಕೂಡ ಮತ್ತೆ ನೆಟ್ಸ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೋವಿಡ್ ಸೋಂಕಿನಿಂದಾಗಿ ಐದಾರು ತಿಂಗಳು ಮನೆಯಲ್ಲೇ ಕುಳಿತಿದ್ದ ಆಟಗಾರರು ಈಗ ನೆಟ್ಸ್ ನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.
ಈ ಹಿಂದೆಯೇ ಸುರೇಶ್ ರೈನಾ, ರಿಷಬ್ ಪಂತ್, ಚೇತೇಶ್ವರ ಪೂಜಾರ (ಐಪಿಎಲ್ ನಲ್ಲಿ ಆಡುತ್ತಿಲ್ಲ), ಇಶಾಂತ್ ಶರ್ಮಾ, ಉಮೇಶ್ ಯಾದವ್ ಹಾಗೂ ಕಳೆದ ವಾರದಿಂದ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ನೆಟ್ಸ್ ನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.
ಇದೀಗ ಈ ಸಾಲಿಗೆ ಹೊಸ ಸೇರ್ಪಡೆ ಕೆ. ಎಲ್. ರಾಹುಲ್. ಪಂಜಾಬ್ ಕಿಂಗ್ಸ್ ಇಲೆವೆನ್ ತಂಡದ ನಾಯಕನಾಗಿರುವ ಕೆ.ಎಲ್. ರಾಹುಲ್ ನೆಟ್ಸ್ ನಲ್ಲಿ ತಾಲೀಮ್ ನಡೆಸುತ್ತಿದ್ದಾರೆ. 14 ಸೆಕೆಂಡುಗಳ ವಿಡಿಯೊವನ್ನು ತನ್ನ ಇನ್ ಸ್ಟಾ ಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಕಿವಿಯಲ್ಲಿ ಸಂಗೀತ ಎಂಬ ಟ್ಯಾಗ್ ಲೈನ್ ಕೂಡ ಹಾಕಿಕೊಂಡಿದ್ದಾರೆ.
ಕಿಂಗ್ಸ್ ಇಲೆವೆನ್ ತಂಡ ಬಿಡ್ ನಲ್ಲಿ 11 ಕೋಟಿ ರೂಪಾಯಿಗೆ ಕೆ.ಎಲ್. ರಾಹುಲ್ ಅವರನ್ನು ಖರೀದಿ ಮಾಡಿತ್ತು. ಕಿಂಗ್ಸ್ ಇಲೆವೆನ್ ತಂಡದ ಮಾಜಿ ನಾಯಕ ಆರ್. ಅಶ್ವಿನ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಖರೀದ ಮಾಡಿತ್ತು.
ಐಪಿಎಲ್ ವೇತನ ಶ್ರೇಣಿಯಲ್ಲಿ ಕೆ.ಎಲ್. ರಾಹುಲ್ 37ನೇ ಸ್ಥಾನದಲ್ಲಿದ್ದಾರೆ. ಕೆ.ಎಲ್. ರಾಹುಲ್ ಅವರ ಐಪಿಎಲ್ ಒಟ್ಟು ಸಂಭಾವಣೆ 371,000,000 ರೂಪಾಯಿಯಾಗಿದೆ.
ಒಟ್ಟಿನಲ್ಲಿ ಕಲಾತ್ಮಕ ಆಟದ ಜೊತೆ ಆಕ್ರಮಣಕಾರಿ ಆಟದ ಮೂಲಕವೂ ಗಮನ ಸೆಳೆದಿರುವ ಕೆ.ಎಲ್. ರಾಹುಲ್ 2020ರ ಐಪಿಎಲ್ ಟೂರ್ನಿಯನ್ನು ಕಾತರದಿಂದ ಎದುರು ನೋಡುತ್ತಿದ್ದಾರೆ. ಟೀಮ್ ಇಂಡಿಯಾದ ಅಪತ್ಬಾಂಧವನಾಗಿರುವ ಕೆಎಲ್ ಆರ್ ಏಕದಿನ ಮತ್ತು ಟಿ-ಟ್ವೆಂಟಿ ಟೂರ್ನಿಗಳಲ್ಲಿ ವಿಕೆಟ್ ಕೀಪರ್ ಜವಾಬ್ದಾರಿಯನ್ನು ಕೂಡ ನಿಭಾಯಿಸುತ್ತಿದ್ದಾರೆ.
ಇನ್ನು ಐಪಿಎಲ್ ನಲ್ಲಿ ಅನುಭವಿ ಆಟಗಾರನಾಗಿರುವ ರಾಹುಲ್, 2018ರ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. 14 ಪಂದ್ಯಗಳಲ್ಲಿ 659 ರನ್ ದಾಖಲಿಸಿದ್ದರು. ಇದ್ರಲ್ಲಿ ಆರು ಅರ್ಧಶತಕ ಹಾಗೂ ಒಂದು ಶತಕವಿತ್ತು. ಕಳೆದ ವರ್ಷ ಅಂದ್ರೆ 2019ರಲ್ಲೂ ಶ್ರೇಷ್ಠ ಪ್ರದರ್ಶನ ನೀಡಿದ್ದರು. 14 ಪಂದ್ಯಗಳಲ್ಲಿ 593 ರನ್ ಗಳಿಸಿದ್ದು, ಆರು ಅರ್ಧಶತಕ ಹಾಗೂ ಒಂದು ಶತಕ ಸಿಡಿಸಿದ್ದರು.








