ಐಪಿಎಲ್ 2020 – ಎಬಿಡಿ ಬೊಂಬಾಟ್ ಆಟಕ್ಕೆ ಬೆದರಿದ ಕೆಕೆಆರ್
ಶಿಸ್ತು ಬದ್ಧ ಆಟವನ್ನಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಟೂರ್ನಿಯಲ್ಲಿ ಐದನೇ ಜಯ ಸಾಧಿಸಿತ್ತು.
ಟೂರ್ನಿಯ 28ನೇ ಪಂದ್ಯದಲ್ಲಿ ಆರ್ ಸಿಬಿ ತಂಡ 82 ರನ್ ಗಳಿಂದ ಕೆಕೆಆರ್ ತಂಡವನ್ನು ಪರಾಭವಗೊಳಿಸಿತು.
ಶಾರ್ಜಾದಲ್ಲಿ ಟಾಸ್ ಗೆದ್ದ ಆರ್ ಸಿಬಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು.
ಆರಂಭಿಕ ದೇವದತ್ತ್ ಪಡಿಕ್ಕಲ್ ಮತ್ತು ಆರೋನ್ ಫಿಂಚ್ 47 ಎಸೆತಗಳಲ್ಲಿ 71 ರನ್ ಕಲೆ ಹಾಕಿದ್ದರು.
ಈ ಹಂತದಲ್ಲಿ 32 ರನ್ ಗಳಿಸಿದ್ದ ದೇವದತ್ ಪಡಿಕ್ಕಲ್ ರಸೆಲ್ ಗೆ ವಿಕೆಟ್ ಒಪ್ಪಿಸಿದ್ರು.
ನಂತರ 47 ರನ್ ದಾಖಲಿಸಿದ್ದ ಆರೋನ್ ಫಿಂಚ್ ಅವರು ಪ್ರಸಿದ್ಧ್ ಕೃಷ್ಣ ಅವರಿಗೆ ಬಲಿಯಾದ್ರು.
ಬಳಿಕ ಶಾರ್ಜಾ ಅಂಗಣದಲ್ಲಿ ಅಬ್ಬರಿಸಿದ್ದು ಎಬಿಡಿ ವಿಲಿಯರ್ಸ್.
ಎಬಿಡಿ ಸಿಡಿಲಬ್ಬರದ ಬ್ಯಾಟಿಂಗ್ಗೆ ನಾಯಕ ವಿರಾಟ್ ಕೊಹ್ಲಿ ಕೂಡ ಸಾಥ್ ನೀಡಿದ್ರು.
ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ಮೂರನೇ ವಿಕೆಟ್ಗೆ ಅಜೇಯ ಶತಕದ ಜೊತೆಯಾಟವನ್ನು ಆಡಿದ್ದರು.
ಎಬಿಡಿ ವಿಲಿಯರ್ಸ್ ಅವರು ಕೇವಲ 33 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಆರು ಸಿಕ್ಸರ್ ಗಳ ಸಹಾಯದಿಂದ ಅಜೇಯ 73 ರನ್ ದಾಖಲಿಸಿದ್ರು.
ಮತ್ತೊಂದೆಡೆ ನಾಯಕ ವಿರಾಟ್ ಕೊಹ್ಲಿ ತಾಳ್ಮೆಯ ಆಟವನ್ನಾಡಿದ್ರು. 28 ಎಸೆತಗಳಲ್ಲಿ ಒಂದು ಬೌಂಡರಿಯ ನೆರವಿನಿಂದ ಕೊಹ್ಲಿ ಅಜೇಯ 33 ರನ್ ಗಳಿಸಿದ್ರು.
ಅಂತಿಮವಾಗಿ ಆರ್ ಸಿಬಿ ತಂಡ ಎರಡು ವಿಕೆಟ್ ಕಳೆದುಕೊಂಡು 194 ರನ್ ದಾಖಲಿಸಿತು.
ಕಠಿಣ ಸವಾಲನ್ನು ಬೆನ್ನಟ್ಟಿದ್ದ ಕೆಕೆಆರ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮೆನ್ ಗಳು ಕೂಡ ಸಹಾಯ ಮಾಡಲಿಲ್ಲ.
ಟಾಮ್ ಬಂಟನ್ 8 ರನ್, ನಿತೇಶ್ ರಾಣಾ 9 ರನ್, ಇಯಾನ್ ಮೊರ್ಗಾನ್ 8 ರನ್ ಹಾಗೂ ದಿನೇಶ್ ಕಾರ್ತಿಕ್ 1 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದ್ರು.
ಇನ್ನೊಂದೆಡೆ ಆರಂಭಿಕ ಶುಬ್ಮನ್ ಗಿಲ್ ಕೊಂಚ ಮಟ್ಟಿನ ಪ್ರತಿರೋಧ ಒಡ್ಡಿದ್ರು. ಶುಬ್ಮನ್ ಅವರು 34 ರನ್ ಗಳಿಸಿ ರನೌಟಾದ್ರು.
ಅದೇ ರೀತಿ ಆಂಡ್ರೆ ರಸೆಲ್ 16 ರನ್ ಹಾಗೂ ರಾಹುಲ್ ತ್ರಿಪಾಠಿ 16 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದ್ರು.
ಇನ್ನುಳಿದಂತೆ ಪ್ಯಾಟ್ ಕಮಿನ್ಸ್, ಕಮಲೇಶ್ ನಾಗರ್ಕೊಟಿ ಹೆಚ್ಚು ಹೊತ್ತು ಕ್ರಿಸ್ ನಲ್ಲಿ ನಿಲ್ಲಲಿಲ್ಲ.
ವರುಣ್ ಚಕ್ರವರ್ತಿ ಅಜೇಯ 7 ರನ್ ಹಾಗು ಪ್ರಸಿದ್ಧ್ ಕೃಷ್ಣ ಅಜೇಯ 2 ರನ್ ಗಳಿಸಿದ್ರು.
ಅಂತಿಮವಾಗಿ ಕೆಕೆಆರ್ ತಂಡ 9 ವಿಕೆಟ್ ಕಳೆದುಕೊಂಡು 112 ರನ್ ಗಳಿಸಲಷ್ಟೇ ಶಕ್ತವಾಯ್ತು.
ಕ್ರಿಸ್ ಮೋರಿಸ್ ಮತ್ತು ವಾಷಿಂಗ್ಟನ್ ಸುಂದರ್ ತಲಾ ಎರಡು ವಿಕೆಟ್ ಉರುಳಿಸಿದ್ರು.
ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಎಬಿಡಿ ವಿಲಿಯರ್ಸ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.








