ಐಪಿಎಲ್ 2020 -ಟೆವಾಟಿಯಾ ರಾಯಲ್ ಟಕ್ಕೆ ಸೋತು ಹೋದ ಸನ್ ರೈಸರ್ಸ್
ಐಪಿಎಲ್ ಟೂರ್ನಿಯ 24ನೇ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ತಂಡ ಐದು ವಿಕೆಟ್ ಗಳಿಂದ ಸನ್ ರೈಸರ್ಸ್ ಹೈದ್ರಬಾದ್ ತಂಡದ ವಿರುದ್ಧ ಅಚ್ಚರಿಯ ಜಯ ಸಾಧಿಸಿತು.
ಟಾಸ್ ಗೆದ್ದುಕೊಂಡಿದ್ದ ಸನ್ ರೈಸರ್ಸ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಹೈದ್ರಬಾದ್ ತಂಡದ ಆರಂಭಿಕ ಜೋನಿ ಬೇರ್ ಸ್ಟೋ 16 ರನ್ಗೆ ಸುಸ್ತಾದ್ರು.
ಬಳಿಕ ಆರಂಭಿಕ ಡೇವಿಡ್ ವಾರ್ನರ್ ಮತ್ತು ಮನೀಷ್ ಪಾಂಡೆ ಜವಾಬ್ದಾರಿಯುತ ಆಟವನ್ನಾಡಿದ್ರು.
ಡೇವಿಡ್ ವಾರ್ನರ್ 38 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್ ಗಳ ಸಹಾಯದಿಂದ 48 ರನ್ ಸಿಡಿಸಿದ್ರು.
ಹಾಗೇ ಮನೀಷ್ ಪಾಂಡೆ 44 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಮೂರು ಸಿಕ್ಸರ್ ಗಳ ಸಹಾಯದಿಂದ 54 ರನ್ ದಾಖಲಿಸಿದ್ರು.
ನಂತರ ಕೇನ್ ವಿಲಿಯನ್ಸನ್ ಅಜೇಯ 22 ರನ್ ಹಾಗೂ ಪ್ರಿಯರ್ಮ್ ಗರ್ಗ್ 15 ರನ್ ಗಳಿಸಿದ್ರು.
ಪರಿಣಾಮ ಸನ್ ರೈಸರ್ಸ್ ಹೈದ್ರಬಾದ್ ತಂಡ 4 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು.
ಗೆಲ್ಲಲು 159 ರನ್ ಗಳ ಸವಾಲಿಗೆ ಪ್ರತ್ಯುತ್ತರ ನೀಡಿದ್ದ ರಾಜಸ್ತಾನ ರಾಯಲ್ಸ್ ತಂಡ ಆರಂಭದಲ್ಲೇ ಆಘಾತದ ಮೇಲೆ ಆಘಾತ ಅನುಭವಿಸಿತ್ತು.
ಬೆನ್ ಸ್ಟೋಕ್ಸ್ 5 ರನ್, ಜೋಸ್ ಬಟ್ಲರ್ 16 ರನ್ ಹಾಗೂ ಸ್ಟೀವನ್ ಸ್ಮಿತ್ 5 ರನ್ ಗಳಿಸಿ ನಿರಾಸೆ ಮೂಡಿಸಿದ್ರು.
ಸಂಜು ಸಾಮ್ಸನ್ ಅಬ್ಬರ 26 ರನ್ಗೆ ಕೊನೆಗೊಂಡಿತ್ತು. ರಾಬಿನ್ ಉತ್ತಪ್ಪ 18 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದ್ರು.
ಬಳಿಕ ರಿಯಾನ್ ಪರಾಗ್ ಮತ್ತು ರಾಹುಲ್ ಟೆವಾಟಿಯಾ ಪಂದ್ಯದ ಗತಿಯನ್ನೇ ಬದಲಾಯಿಸಿದ್ರು.
ಇವರಿಬ್ಬರು ಐದನೇ ವಿಕೆಟ್ಗೆ ಅಜೇಯ 86 ರನ್ ಕಲೆ ಹಾಕಿ ತಂಡಕ್ಕೆ ರೋಚಕ ಜಯ ಒದಗಿಸಿಕೊಟ್ರು.
ರಿಯಾನ್ ಪರಾಗ್ 26 ಎಸೆತಗಳಲ್ಲಿ ತಲಾ ಎರಡು ಬೌಂಡರಿ ಮತ್ತು ಸಿಕ್ಸರ್ ಗಳ ಸಹಾಯದಿಂದ ಅಜೇಯ 42 ರನ್ ಗಳಿಸಿದ್ರು.
ಇನ್ನೊಂದೆಡೆ ರಾಹುಲ್ ಟೆವಾಟಿಯಾ 28 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್ ಗಳ ನೆರವಿನಿಂದ ಅಜೇಯ 45 ರನ್ ದಾಖಲಿಸಿದ್ರು.
ರಾಹುಲ್ ಟೆವಾಟಿಯಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.