ಬೆಂಗಳೂರು : ಕೊರೊನಾ ವೇಗಕ್ಕೆ ಬ್ರೇಕ್ ಹಾಕಲು ರಾಜ್ಯ ಬಿಜೆಪಿ ಸರ್ಕಾರ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನ ಲಾಕ್ ಡೌನ್ ಮಾಡಿದೆ. ಈ ಬಗ್ಗೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಕ್ರಿಯೆ ನೀಡಿದ್ದು, ‘ಲಾಕ್ ಡೌನ್ ಮಾಡುವುದರಿಂದ ಏನೂ ಪ್ರಯೋಜನ ಇಲ್ಲ, ಸರ್ಕಾರವೇ ಕೊರೊನಾ ಬಂದ ರೀತಿ ವರ್ತನೆ ಮಾಡ್ತಿದೆ’ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ‘ಬೆಂಗಳೂರಿಂದ 25 ಲಕ್ಷ ಜನ ವಲಸೆ ಹೋಗಿದ್ದಾರೆ. ಅವರನ್ನು ತಡೆಯೋಕೆ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಗುಡುಗಿದರು. ಜನಸಾಮಾನ್ಯರು, ಬೆಂಗಳೂರು ಬಿಡದ ಹಾಗೆ ವ್ಯವಸ್ಥೆ ಮಾಡಲಿ. ವಿರೋಧ ಪಕ್ಷಗಳೂ ಸರಿಯಾಗಿ ಕೆಲಸ ಮಾಡ್ತಿಲ್ಲ. ಮೊದಲು ಆಸ್ಪತ್ರೆ, ಡಾಕ್ಟರ್, ಔಷಧಿ ಇತರ ವ್ಯವಸ್ಥೆಗಳನ್ನು ಸರಿ ಮಾಡಬೇಕು. ಗಡಿ ಭಾಗಗಳನ್ನು ಬಂದ್ ಮಾಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ ವಾಟಾಳ್, ಮಹಾರಾಷ್ಟ್ರದಿಂದ ರೈಲುಗಳನ್ನು ಬಿಟ್ಟದ್ದು ಏಕೆ ಎಂದು ಪ್ರಶ್ನಿಸಿ, ಇತರೆ ರಾಜ್ಯಗಳಿಂದಲೇ ನಮ್ಮಲ್ಲಿ ಸೋಂಕು ಹರಡಿದೆ’ ಎಂದು ಗರಂ ಆದರು.
ಇದೇ ವೇಳೆ ಎಲ್ಲಾ ವಿದ್ಯಾರ್ಥಿಗಳನ್ನೂ ಪರೀಕ್ಷೆ ಇಲ್ಲದೇ ಪಾಸ್ ಮಾಡಬೇಕು. ಅಂತಿಮ ವರ್ಷದ ವಿದ್ಯಾರ್ಥಿ ಗಳಿಗೂ ಪರೀಕ್ಷೆ ಮಾಡದೇ ಪಾಸ್ ಮಾಡಬೇಕು ಎಂದು ವಾಟಾಳ್ ನಾಗರಾಜ್ ಸರ್ಕಾರವನ್ನು ಆಗ್ರಹಿಸಿದ್ದಾರೆ.