ನವದೆಹಲಿ: ಭಾರತ ಸೇರಿದಂತೆ ಜಗತ್ತಿನಾದ್ಯಂತ ಮಾರಣಹೋಮ ನಡೆಸುತ್ತಿರುವ ಮಹಾಮಾರಿ ಕೊರೊನಾ ಓಡಿಸಲು ಕೊವಾಕ್ಸಿನ್ ಲಸಿಕೆ ಕೆಲವೇ ದಿನಗಳಲ್ಲಿ ಸಂಜೀವಿನಿಯಾಗಿ ಹೊರಹೊಮ್ಮಲಿದೆ. ಭಾರತದ ಮೊದಲ ಕೊರೊನಾ ಲಸಿಕೆ ಕೊವಾಕ್ಸಿನ್ ಬಿಡುಗಡೆಗೂ ಮುಹೂರ್ತ ಫಿಕ್ಸ್ ಆಗಿದ್ದು, ಆಗಸ್ಟ್ 15 ಅಥವಾ ಅಷ್ಟರೊಳಗೆ ಲಸಿಕೆ ಬಿಡುಗಡೆ ಮಾಡಲು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕಂಪನಿ ಸಿದ್ಧತೆ ಆರಂಭಿಸಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್(ಐಸಿಎಂಆರ್) ಹಾಗೂ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕಂಪನಿ ಜಂಟಿಯಾಗಿ ಈ ಲಸಿಕೆ ಅಭಿವೃದ್ಧಿ ಪಡಿಸಿವೆ. ಭಾರತದ ಮಹತ್ವಾಕಾಂಕ್ಷೆಯ ಲಸಿಕೆ ಸಂಶೋಧನೆಯಲ್ಲಿ ಮೊದಲ ಯಶಸ್ಸು ಸಾಧಿಸಿದ್ದು, ಆಗಸ್ಟ್ 15ರೊಳಗೆ ಜನ ಸಾಮಾನ್ಯರಿಗೂ ಈ ಲಸಿಕೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂಬ ಆಶಯ ವ್ಯಕ್ತವಾಗಿದೆ.
ಲಸಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಂಬಂಧ ಕೊನೆ ಹಂತದ ಪರೀಕ್ಷಾ ಪ್ರಕ್ರಿಯೆಗಳು ನಡೆದಿವೆ. ಅಂತಿಮ ಪರೀಕ್ಷಾ ವರದಿಗಳು ಬರುತ್ತಿದ್ದಂತೆ ಲಸಿಕೆ ಬಿಡುಗಡೆ ಮಾಡಲಾಗುತ್ತಿದೆ. ಈ ಸಂಬಂಧ ಬೇಡಿಕೆಗೆ ಅಗತ್ಯವಿರುವ ಲಸಿಕೆ ಉತ್ಪಾದಿಸುವಂತೆ ಭಾರತ್ ಬಯೋಟೆಕ್ ಕಂಪನಿಗೆ ಪತ್ರ ಬರೆಯಲಾಗಿದೆ ಎಂದು ಐಸಿಎಂಆರ್ ಮಹಾನಿರ್ದೇಶಕ ಬಲರಾಮ್ ಭಾರ್ಗವ ತಿಳಿಸಿದ್ದಾರೆ.
ಭಾರತ್ ಬಯೋಟೆಕ್ ತಯಾರಿಸಿದ ಕೊವಾಕ್ಸಿನ್ ಲಸಿಕೆಯನ್ನು ಮಾನವನ ಮೇಲೆ ಪ್ರಯೋಗ ಮಾಡಿ ವರದಿ ನೀಡಲು 12 ವೈದ್ಯಕೀಯ ಸಂಸ್ಥೆಗಳಿಗೆ ಕಳಿಸಿಕೊಡಲಾಗಿದೆ. ಸಾರ್ಸ್-ಕೋವ್-2 ಅಂಶಗಳನ್ನು ಹೊಂದಿರುವ ಈ ಲಸಿಕೆಯನ್ನು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆ, ಐಸಿಎಂಆರ್, ಹಾಗೂ ಭಾರತ್ ಬಯೋಟೆಕ್ ಜಂಟಿಯಾಗಿ ಪ್ರಾಯೋಗಿಕ ಪರೀಕ್ಷೆ ನಡೆಸಿವೆ. ಭುನನೇಶ್ವರದ ಎಸ್ಯುಎಂ ಆಸ್ಪತ್ರೆಯಲ್ಲಿ ಲಸಿಕೆಯನ್ನು ಮಾನವನ ಮೇಲೆ ಪ್ರಯೋಗ ಮಾಡಲಾಗಿದೆ ಎಂದು ಎಂಸಿಎಂಆರ್ ಮೂಲಗಳು ತಿಳಿಸಿವೆ.
ದೇಶಾದ್ಯಂತ ಮಹಾಮಾರಿ ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ತುರ್ತಾಗಿ ಲಸಿಕೆ ಬಿಡುಗಡೆ ಮಾಡುವಂತೆ ಒತ್ತಡ ಹೆಚ್ಚುತ್ತಿದೆ. ಹೀಗಾಗಿ ಮಾನವ ಪ್ರಯೋಗಕ್ಕೆ ಕಳಿಸಿಕೊಡಲಾದ ಸಂಶೋಧನಾ ಸಂಸ್ಥೆಗಳ ಒಪ್ಪಿಗಾಗಿ ಕಾಯುತ್ತಿದ್ದೇವೆ. ಎಲ್ಲವೂ ಅಂದುಕೊಂಡಂತೆ ಆದರೆ ಆಗಸ್ಟ್ 15 ಅಥವಾ ಅದರೊಳಗೆ ಕೋವಾಕ್ಸಿನ್ ಲಸಿಕೆ ಮಾರುಕಟ್ಟೆಗೆ ಬರಲಿದೆ ಎಂದು ಐಸಿಎಂಆರ್ ವಿಶ್ವಾಸ ವ್ಯಕ್ತಪಡಿಸಿದೆ.
ಕೊವಾಕ್ಸಿನ್ ಲಸಿಕೆ ಮಾನವ ಪ್ರಯೋಗಕ್ಕೆ ಭುವನೇಶ್ವರದ ಎಸ್ಯುಎಂ, ರೋಹಟಗಿ, ದೆಹಲಿ, ಪಾಟ್ನಾ, ಕರ್ನಾಟಕದ ಬೆಳಗಾವಿ, ನಾಗಪುರ, ಗೋರಕ್ಪುರ, ತಮಿಳುನಾಡಿನ ಕತ್ತನ್ಕುಲತ್ತೂರ್, ಹೈದರಾಬಾದ್, ಕಾನ್ಪುರ ಹಾಗೂ ಗೋವಾದ ಆಸ್ಪತ್ರೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.