ತುಮಕೂರು: ತುಮಕೂರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಂಟು ಜನ ಸೋಂಕಿತರ ಸ್ಥಿತಿ ಗಂಭೀರವಾಗಿದೆ. ಅವರ ಜೀವದ ಬಗ್ಗೆ ಯಾವುದೇ ಗ್ಯಾರಂಟಿ ಇಲ್ಲ ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಅತಂಕ ವ್ಯಕ್ತಪಡಿಸಿದ್ದಾರೆ.
ತುರ್ತು ಪತ್ರಿಕಾಗೋಷ್ಠಿ ನಡೆಸಿದ ಮಾಧುಸ್ವಾಮಿ, ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾಗೆ ಮತ್ತಷ್ಟು ಜೀವಗಳು ಬಲಿಯಾಗಲಿವೆ ಎಂಬ ಸುಳಿವನ್ನು ನೀಡಿದ್ದು, ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಎಂಟು ಜನರ ಸ್ಥಿತಿ ಗಂಭೀರವಾಗಿದೆ. ಅವರ ಜೀವದ ಬಗ್ಗೆ ಯಾವುದೇ ಗ್ಯಾರಂಟಿ ಕೊಡೋಕಾಗಲ್ಲ ಎಂದಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ ಕೊರೊನಾ ಕಮ್ಯುನಿಟಿ ಸ್ಪ್ರೆಡ್ ಆಗೋ ಹಂತಕ್ಕೆ ತಲುಪುತ್ತಿದೆ. ದುರ್ದೈವ ಕೋವಿಡ್ ಪ್ರಕರಣಗಳು ಜಿಲ್ಲೆಯಲ್ಲಿ ವೇಗವಾಗಿ ಹರಡುತ್ತಿದೆ. ಜಿಲ್ಲಾಡಳಿತದಿಂದ ಎಷ್ಟೇ ಶ್ರಮಪಟ್ಟರೂ ನಿಗ್ರಹ ಮಾಡೋದು ಕಷ್ಟ ಎಂಬ ಸ್ಥಿತಿಗೆ ನಾವು ತಲುಪ್ಪಿದ್ದೇವೆ. ಸೋಂಕಿತರ ಸಂಖ್ಯೆಗಿಂತ ಕಮ್ಯುನಿಟಿ ಲೆವೆಲ್ ಗೆ ಹೋಗ್ತಾ ಇರೋದು ಆಘಾತ ತರ್ತಿದೆ ಎಂದು ಹೇಳಿದ್ದಾರೆ.
ಕೊರೊನಾ ಹರಡಬಾರದು ಅಂತ ಹೋರಾಟ ಮಾಡ್ತಾ ಬಂದಿದ್ದೇವೆ. ಎಲ್ಲೋ ಒಂದುಕಡೆ ಪರಿಸ್ಥಿತಿ ನಮ್ಮ ಕೈ ಮೀರುತ್ತಿದೆ. ನಿನ್ನೆಯೂ ಒಬ್ಬರು ಸಾವನ್ನಪ್ಪಿದ್ದಾರೆ. ಅವರನ್ನ ಆಸ್ಪತ್ರೆಗೆ ತರುವ ವೇಳೆಯೇ ಕ್ರಿಟಿಕಲ್ ಆಗಿದ್ರು.
ಉಸಿರಾಟ ಸಮಸ್ಯೆ ಆಗಿದ್ರಿಂದ ಸಾವನ್ನಪ್ಪಿದ್ರು ಎಂದು ಸಚಿವ ಮಾಧುಸ್ವಾಮಿ ಕೊರೊನಾದ ಭಯಾನಕತೆಯನ್ನು ಬಣ್ಣಿಸಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಈವರೆಗೆ ಕೊರೊನಾಗೆ ಒಟ್ಟು 9 ಮಂದಿ ಬಲಿಯಾಗಿದ್ದಾರೆ.








