ಬೆಂಗಳೂರು: ರಾಜ್ಯದಲ್ಲಿ ಹೆಮ್ಮಾರಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಸಿಗದೆ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.
ಇಂದಿನಿಂದ ಮಾಸ್ಕ್ ಧರಿಸದವರಿಗೆ ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಕೊರೊನಾ ಟೆಸ್ಟ್ ಮಾಡಿಸಲಾಗುತ್ತಿದೆ. ಕೊರೊನಾ ಟೆಸ್ಟ್ ಮಾಡಿಸಿಕೊಳ್ಳದೇ ಇದ್ದರೆ 6 ತಿಂಗಳಿಂದ 3 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲು ಒಪ್ಪದೇ ಇದ್ದವರಿಗೆ 1 ಸಾವಿರ ಅಲ್ಲ, 50 ಸಾವಿರ ದಂಡ ಹಾಗೂ 3 ವರ್ಷ ಜೈಲು ಶಿಕ್ಷೆ ವಿಧಿಸಲು ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆಯಡಿ ಕರ್ನಾಟಕ ಸಾಂಕ್ರಾಮಿಕ ರೋಗಗಳ ಸುಗ್ರೀವಾಜ್ಞೆ-2020 ಜಾರಿಗೆ ತಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಕಳೆದ ಮೂರು ವಾರಗಳಿಂದ ಕೊರೊನಾ ತೀವ್ರತೆ ಶೇ.39ರಷ್ಟು ಹೆಚ್ಚಾಗಿದೆ. ಪ್ರತಿದಿನ ಕೊರೊನಾ ಸೋಂಕಿತರ ಸಂಖ್ಯೆ 10 ಸಾವಿರ ಆಸುಪಾಸು ಬರುತ್ತಿರುವ ಹಿನ್ನೆಲೆಯಲ್ಲಿ ಕಠಿಣ ನಿರ್ಧಾರಕ್ಕೆ ಬರಲಾಗಿದೆ.
ಈಗಿರುವ ಮಾಸ್ಕ್ ಧರಿಸವರಿಗೆ 1 ಸಾವಿರ ರೂ. ದಂಡದ ಜೊತೆಗೆ, ಮಾಸ್ಕ್ ಹಾಕಿಲ್ಲದಿದ್ದರೆ ಸ್ಥಳದಲ್ಲಿಯೇ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ. ಕೊರೊನಾ ಟೆಸ್ಟ್ಗೆ ಒಪ್ಪದಿದ್ದರೆ ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ 50 ಸಾವಿರ ದಂಡ ಹಾಗೂ 6 ತಿಂಗಳಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಸುಗ್ರೀವಾಜ್ಞೆ ಜಾರಿಗೆ ತಂದಿದೆ.
ಕೊರೊನಾ ಟೆಸ್ಟ್ ರಿಪೋರ್ಟ್ ಕಡ್ಡಾಯ
ರಾಜ್ಯದಲ್ಲಿ ಇನ್ನು ಮುಂದೆ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲು ನಿರಾಕರಿಸುವಂತಿಲ್ಲ. ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರು ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲೇಬೇಕು. ಪ್ರವಾಸಿ ತಾಣಗಳ ಚೆಕ್ಪೋಸ್ಟ್ಗಳಲ್ಲಿ ಗಂಟಲು ದ್ರವ ಸಂಗ್ರಹಕ್ಕೆ ಸರ್ಕಾರ ಸೂಚನೆ ನೀಡಿದೆ. ಹೋಟೆಲ್, ಹೋಂ ಸ್ಟೇಗಳಲ್ಲಿ ಉಳಿಯುವವರು ಕಡ್ಡಾಯವಾಗಿ ಕೋವಿಡ್ ಟೆಸ್ಟ್ ರಿಪೋರ್ಟ್ ಕೊಡುವುದು ಕಡ್ಡಾಯ ಮಾಡಲಾಗಿದೆ.
ಯಾರಿಗೆ ಕೊರೊನಾ ಟೆಸ್ಟ್ ಕಡ್ಡಾಯ..!
1. ಕೊರೊನಾ ಸೋಂಕಿತರ ಜೊತೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರು ಕಡ್ಡಾಯವಾಗಿ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಬೇಕು.
2. ಜ್ವರದ ಲಕ್ಷಣ ಇರುವವರು, ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು.
3. ಕೋವಿಡ್ ಚಿಕಿತ್ಸೆಯಲ್ಲಿ ತೊಡಗಿರುವ ಆರೋಗ್ಯ ಸಿಬ್ಬಂದಿ ಟೆಸ್ಟ್ ಮಾಡಿಸಿಕೊಳ್ಳಬೇಕು.
4. ಕಂಟೈನ್ಮೆಂಟ್ ಝೋನ್, ಬಫರ್ ಝೋನ್ಗಳಲ್ಲಿ ಇರುವವರು
ಮೇಲ್ಕಂಡ ಅಂಶಗಳು ಇರುವವರು ಕಡ್ಡಾಯವಾಗಿ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲೇಬೇಕು. ಟೆಸ್ಟ್ ಮಾಡಿಸಿಕೊಳ್ಳದೇ ಹೋದರೆ 50 ಸಾವಿರ ದಂಡ ಹಾಗೂ 6 ತಿಂಗಳಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆ ಅನುಭಿಸಬೇಕಾಗುತ್ತದೆ ಎಂದು ಸುಗ್ರೀವಾಜ್ಞೆಯಲ್ಲಿ ತಿಳಿಸಲಾಗಿದೆ.
1000 ರೂ. ದಂಡದ ಮೊತ್ತ ಇಳಿಕೆ ಇಲ್ಲವೇ ಇಲ್ಲ
ಬೆಂಗಳೂರಿನಲ್ಲಿ ಮಾಸ್ಕ್ ಹಾಕದಿದ್ದರೆ ಬಿಬಿಎಪಿ 1000 ರೂ. ದಂಡ ವಿಧಿಸುತ್ತಿದೆ. ದಂಡ ಮೊತ್ತ ಕಡಿಮೆ ಮಾಡುವ ಪ್ರಮೇಯವೇ ಇಲ್ಲ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸ್ಪಷ್ಟನೆ ನೀಡಿದ್ದಾರೆ.
ಮಾಸ್ಕ್ ಹಾಕಿಕೊಳ್ಳುವುದನ್ನು ಕಡ್ಡಾಯ ಮಾಡಿದ್ದೇವೆ. ಮಾಸ್ಕ್ ಹಾಕದವರನ್ನು ಕೊರೊನಾ ಟೆಸ್ಟ್ ಮಾಡುತ್ತಾರೆ. ಮಾರ್ಷಲ್ಗಳು ಮಾಸ್ಕ್ ಹಾಕದವರಿಗೆ 1000 ರೂ. ದಂಡ ಹಾಕುತ್ತಿದ್ದಾರೆ. ದಂಡ ಕಟ್ಟದ ಪ್ರಕರಣಗಳನ್ನು ಪೊಲೀಸರಿಗೆ ಹಸ್ತಾಂತರ ಮಾಡಲಾಗುತ್ತಿದೆ.
ಕೊರೊನಾ ಟೆಸ್ಟ್ ಮಾಡಿಸಿಕೊಂಡು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡ 840 ಕೇಸ್ಗಳನ್ನು ಪೊಲೀಸರಿಗೆ ಹಸ್ತಾಂತರ ಮಾಡಲಾಗಿದೆ. ಈ ಕೇಸ್ಗಳನಬ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಹೀಗಾಗಿ ಕೊರೊನಾ ವಿರುದ್ಧದ ಹೋರಾಟಕ್ಕೆ ಜನರು ಸಹಕಾರ ನೀಡಲೇಕು ಎಂದು ಮಂಜುನಾಥ್ ಪ್ರಸಾದ್ ಮನವಿ ಮಾಡಿದ್ದಾರೆ.
ಇನ್ಮುಂದೆ ಪೊಲೀಸರಿಂದಲೂ ದಂಡ ವಸೂಲಿ
ಇಲ್ಲಿಯವರೆಗೆ ಬೆಂಗಳೂರು ನಗರದಲ್ಲಿ ಮಾಸ್ಕ್ ಹಾಕದವರಿಗೆ ಬಿಬಿಎಂಪಿಯ ಮಾರ್ಷಲ್ಗಳು ಮಾತ್ರ ದಂಡ ವಸೂಲಿ ಮಾಡುತ್ತಿದ್ದರು. ಆದ್ರೆ, ಜನರು ಮಾರ್ಷಲ್ಗಳಿಗೆ ಕ್ಯಾರೆ ಎನ್ನದೇ ಅವರ ಜೊತೆ ಜಗಳಕ್ಕೆ ನಿಲ್ಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಸ್ಕ್ ಹಾಕದವರಿಗೆ ಪೊಲೀಸರೂ ಕೂಡ ಕಮಿಷನರೇಟ್ ವ್ಯಾಪ್ತಿಯಲ್ಲಿ ದಂಡ ವಿಧಿಸಲು ಅವಕಾಶ ನೀಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.