ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಹಾನಿರ್ಲಕ್ಷ್ಯಕ್ಕೆ ರಾಜಧಾನಿ ಬೆಂಗಳೂರು ನಗರದಲ್ಲಿ ಏನು ಬೇಕಾದರೂ ಸಾಧ್ಯ ಎಂಬುದಕ್ಕೆ ಮಿನರ್ವ ಬಸ್ ನಿಲ್ದಾಣ ಜ್ವಲಂತ ಸಾಕ್ಷಿಯಾಗಿದೆ.
ಕಳೆದ ಆರು ತಿಂಗಳ ಹಿಂದೆ ನೂತನವಾಗಿ ನಿರ್ಮಿಸಲಾಗಿದ್ದ ಮಿನರ್ವ ಬಸ್ ನಿಲ್ದಾಣದ ಮೇಲೆ ಕಳೆದ ವರ್ಷ ಮಳೆ ಬಂದಾಗ ಮರ ಬಿದ್ದಿತ್ತು. ಈ ಹಿನ್ನಲೆ ಕಳೆದ ಆರು ತಿಂಗಳ ಹಿಂದೆ ಮಾವಳ್ಳಿ ಸರ್ಕಲ್ ನಲ್ಲಿ ಹೊಸದಾಗಿ ಬಸ್ ನಿಲ್ದಾಣ ತೆರೆಯಲಾಗಿತ್ತು. ಆದ್ರೆ ರಾತ್ರಿ ದಿಡೀರನೇ ಬಸ್ ಸ್ಟಾಂಡ್ ಮಂಗ ಮಾಯವಾಗಿದ್ದು, ಗಾಬರಿ ಹುಟ್ಟಿಸಿದೆ.

ಸುಮಾರು 80 ವರ್ಷಗಳ ಇತಿಹಾಸ ಇರುವ ಬಸ್ ಸ್ಟಾಪ್ ಮೇಲೆ ಕಳೆದ ವರ್ಷ ಬಿದ್ದ ಭಾರಿ ಮಳೆಯಿಂದ ಮರ ಬಿದ್ದು ಸಂಪೂರ್ಣ ಜಖಂಗೊಂಡಿತ್ತು. ಹೀಗಾಗಿ ಅದೇ ಸ್ಥಳದಲ್ಲಿ ಬಿಬಿಎಂಪಿ ಹೊಸ ಬಸ್ ನಿಲ್ದಾಣ ನಿರ್ಮಾಣ ಮಾಡಿತ್ತು. ಆದರೆ, ರಾತ್ರೋರಾತ್ರಿ ಕಿಡಿಗೇಡಿಗಳು ಬಸ್ ನಿಲ್ದಾಣವನ್ನು ಕಿತ್ತು ಪಕ್ಕಕ್ಕೆ ಇರುವ ಬಿಲ್ಡಿಂಗ್ ನಲ್ಲಿ ಎಸೆದು ಹೋಗಿದ್ದಾರೆ.

ಈ ಹಿನ್ನಲೆ ಮಾವಳ್ಳಿ ಕನ್ನಡ ಸಂಘ ಹಾಗೂ ಸ್ಥಳೀಯರು ಬಸ್ ನಿಲ್ದಾಣಕ್ಕಾಗಿ ಪ್ರತಿಭಟನೆ ನಡೆಸಿದ್ದಾರೆ. ರಾತ್ರೋರಾತ್ರಿ ಕಿಡಿಗೇಡಿಗಳು ಬಸ್ ಸ್ಟಾಪ್ ತೆರವುಗೊಳಿಸಿದ್ದಾರೆ ಎಂದು ಆರೋಪಿಸಿ ಬಿಬಿಎಂಪಿ ಆಯುಕ್ತರು, ಬಿಎಂಟಿಸಿ ಹಾಗೂ ವಿವಿಪುರಂ ಪೊಲೀಸರಿಗೆ ದೂರು ನೀಡಿದ್ದಾರೆ.
ಬಸ್ ನಿಲ್ದಾಣದ ಹಿಂದೆ ನಿರ್ಮಾಣವಾಗುತ್ತಿರುವ ಕಟ್ಟಡದ ಮಾಲೀಕರು ಬಸ್ ಸ್ಟಾಪ್ ತೆರವುಗೊಳಿಸಿರೋ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಬಸ್ ಸ್ಟಾಂಡ್ ಮರು ನಿರ್ಮಾಣ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಬಸ್ ಸ್ಟಾಪ್ ಇಲ್ಲದೇ ಇರುವುದರಿಂದ ಬಸ್ಗಳು ನಿಲ್ಲದೆ ಹೋಗುತ್ತಿರುವರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಪ್ರಭಾವಿಗಳ ಒತ್ತಡಕ್ಕೆ ಮಣಿಯುವ ಬಿಬಿಎಂಪಿ ಈಗಾಗಲೇ ಸಾವಿರಾರು ಆಸ್ತಿಪಾಸ್ತಿಗಳು ಕಳೆದುಕೊಂಡಿದೆ. ನೂರಾರು ಕೋಟಿ ಬೆಲೆಬಾಳುವ ಭೂಮಿ ನುಂಗಣ್ಣರ ಪಾಲಾಗುತ್ತಿದ್ದರೂ ಬಿಬಿಎಂಪಿ ನಿದ್ದೆ ಮಾಡುತ್ತದೆ ಎಂಬುದಕ್ಕೆ ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ಘಟನೆಗಳೇ ಸಾಕ್ಷಿಯಾಗಿವೆ.

ಪ್ರಭಾವಿಗಳು ಕಬಳಿಸಿದ ಭೂಮಿಗಾಗಿ ವರ್ಷಗಟ್ಟಲೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಾನೂನು ಹೋರಾಟ ಮಾಡಬೇಕಾದ ಸ್ಥಿತಿ ಬಿಬಿಎಂಪಿಗೆ ಬಂದೊದಗಿದೆ. ತೀರಾ ಪ್ರಭಾವಿಗಳು ಒತ್ತುವರಿ ಮಾಡಿಕೊಂಡ ಕಡೆ ಬಿಬಿಎಂಪಿ ಅಧಿಕಾರಿಗಳು ಕಣ್ಣೆತ್ತಿಯೂ ನೋಡುತ್ತಿಲ್ಲ. ಹೀಗಾಗಿಯೇ ಮಿನರ್ವ ಬಸ್ ನಿಲ್ದಾಣ ಸೇರಿದಂತೆ ಬಿಬಿಎಂಪಿಯ ಆಸ್ತಿಗಳನ್ನು ರಾಜಾರೋಷವಾಗಿ ಪ್ರಭಾವಿಗಳು ಕಬಳಿಸಲು ಸಾಧ್ಯವಾಗಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








