ಬೆಂಗಳೂರು: ಉಡಾಫೆ ಹೇಳಿಕೆಗಳು, ಆ ಮೇಲೆ ನಾನು ಹಾಗೆ ಹೇಳಿಯೇ ಇಲ್ಲ ಎನ್ನುವುದು ಸಚಿವ ಕೆ.ಎಸ್ ಈಶ್ವರಪ್ಪ ಅವರಿಗೆ ಮಾಮೂಲಿ ಆಗಿದೆ.
ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದ ಹಿನ್ನೆಲೆಯಲ್ಲಿ ವಿದ್ಯಾಗಮ ಯೋಜನೆ ನಿಲ್ಲಿಸಬೇಕಾ, ಶಾಲೆಗಳನ್ನು ಆರಂಭಿಸಬೇಕೇ ಬೇಡವೇ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಸಚಿ ಈಶ್ವರಪ್ಪ ಉಡಾಫೆ ಉತ್ತರ ನೀಡಿ ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ.

ಕೊರೊನಾ ಬಂದ ಕಾರಣ ಎಲ್ಲವನ್ನೂ ನಿಲ್ಲಿಸಲು ಆಗುವುದಿಲ್ಲ. ಕೊರೊನಾದಿಂದ ಕೆಲ ಕೇಂದ್ರ ಸಚಿವರು, ಸಂಸದರು ಸತ್ತಿದ್ದಾರೆ. ಹಾಗಂತ ಲೋಕಸಭೆ ಮುಚ್ಚೋಕೆ ಆಗುತ್ತಾ, ರೈತರು ಕೊರೊನಾದಿಂದ ಮೃತಪಟ್ರೆ ಕೃಷಿ ಮಾಡೋದನ್ನ ನಿಲ್ಲಿಸಿ ಅಂದ್ರೆ ಆಗುತ್ತಾ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.
ವಿದ್ಯಾಗಮಕ್ಕೂ ಕೊರೊನಾಗೂ ಸಂಬಂಧ ಇಲ್ಲ. ವಿದ್ಯಾಗಮ ಇಲ್ಲದಿರುವ ಸಂದರ್ಭದಲ್ಲಿಯೇ ಕೋವಿಡ್ ಬಂದಿದೆ. ಕೊರೊನಾ ಬಂತು ಅಂತ ಯೋಜನೆ ನಿಲ್ಲಿಸಲು ಆಗುತ್ತಾ ಎಂದು ಹೇಳುವ ಮೂಲಕ ಯೋಜನೆಯನ್ನು ಸಮರ್ಥಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ಶಾಲೆಗಳನ್ನು ಆರಂಭ ಮಾಡಬೇಕಾ ಬೇಡವಾ ಎಂಬ ಚರ್ಚೆ ನಡೆಯುತ್ತಿದೆ. ಶಾಲೆಗಳ ಆರಂಭದ ಬಗ್ಗೆ ಸರ್ಕಾರ ಎಲ್ಲರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಿದೆ. ಪೋಷಕರು ಹಾಗೂ ತಜ್ಞರ ಜೊತೆ ಸರ್ಕಾರ ಚರ್ಚೆ ಮಾಡುತ್ತಿದೆ. ನನ್ನ ಅಭಿಪ್ರಾಯದ ಪ್ರಕಾರ ಶಾಲೆ ಆರಂಭ ಮಾಡುವುದು ಬೇಡ ಎಂದು ತಿಳಿಸಿದ್ದಾರೆ.








