ಬೆಂಗಳೂರು : ಮೋದಿ ಒಬ್ಬ ಮೋಸಗಾರ, ಬಿಜೆಪಿ ಮೋಸಗಾರ ಪಕ್ಷ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಕೇಸರಿ ಪಡೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಕೆಪಿಸಿಸಿ ಅಧ್ಯಕ್ಷರು ಕಾರ್ಯಾಧ್ಯಕ್ಷರು ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ, ಕಾಂಗ್ರೆಸ್ ಪಕ್ಷದ ಮುಂದೆ ಅನೇಕ ಸವಾಲುಗಳಿವೆ. ಎಲ್ಲರೂ ಒಗ್ಗಟ್ಟಾಗಿ ಪಕ್ಷ ಕಟ್ಟುವುದೇ ನಮ್ಮ ಗುರಿ. ನಾವು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೆಗಲಿಗೆ ಹೆಗಲು ಕೊಟ್ಟು ಸಾಗಬೇಕು. ಎಲ್ಲರನ್ನ ಜೊತೆಯಲ್ಲಿ ಕರದುಕೊಂಡು ಹೋಗುವುದರ ಜೊತೆಗೆ ಪಕ್ಷದ ತತ್ವ, ಸಿದ್ಧಾಂತ ಬಿಡಬಾರದು ಎಂದರು.
ಇದೇ ವೇಳೆ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ, ಮೋದಿ, ಅಮಿತ್ ಶಾ ಇಬ್ಬರೂ ಸೇರಿ ಇಡೀ ದೇಶವನ್ನ ಹಾಳು ಮಾಡಲು ಹೊರಟಿದ್ದಾರೆ. ಹಾಗಾಗಿಯೇ ಕೆಟ್ಟ ಕಾರ್ಯಕ್ರಮಗಳನ್ನ ಜಾರಿಗೆ ತಂದಿದ್ದಾರೆ. ಇಡೀ ದೇಶದಲ್ಲಿ ಕೊರೊನಾ ಹೆಚ್ಚಲು ಮೋದಿ, ಅಮಿತ್ ಶಾ ಕಾರಣ ಎಂದು ದೂರಿದ ಕಾಂಗ್ರೆಸ್ ನಾಯಕ, ಅವರು ತಪ್ಪು ಮಾಡಿದ್ದರೂ ಯಾವುದನ್ನೂ ಎಂದೂ ಒಪ್ಪುವುದಿಲ್ಲ. ವಿರೋಧ ಪಕ್ಷದವರ ಮಾತನ್ನ ಕೇಳುವುದಿಲ್ಲ. ಸುಳ್ಳು ಹೇಳಿಕೊಂಡು ಬಿಜೆಪಿ ಪಕ್ಷ ಬೆಳೆಸುತ್ತಿದ್ದಾರೆ. ಇದನ್ನ ನಾವು ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು ಎಂದು ಪ್ರಧಾನಿ ಹಾಗೂ ಕೇಂದ್ರ ಗೃಹಸಚಿವರ ವಿರುದ್ಧ ಹರಿಹಾಯ್ದರು.
ಇನ್ನು ಮೋದಿ, ಅಮಿತ್ ಶಾರನ್ನ ವೈಭವಿಕರಿಸಲಾಗುತ್ತಿದೆ. ಇದರ ಹಿಂದೆ ಆರ್ ಎಸ್ ಎಸ್ ಇದೆ. ಈಗಂತೂ ಯುವಕರು ಮೋದಿ ತಪ್ಪು ಮಾಡಿದರೂ ಹೊಗಳುತ್ತಾರೆ ಎಂದು ಬೇಸರ ಹೊರಹಾಕಿದ ಖರ್ಗೆ, ಮೋದಿ, ಶಾ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಪ್ರಿಯಾಂಕ ಗಾಂಧಿ ವಿರುದ್ಧ ದ್ವೇಷದ ರಾಜಕಾರಣ ನಡೆದಿದೆ. ಮೊದಲು ಇದರ ವಿರುದ್ಧ ಬೆನ್ನತ್ತಬೇಕು ಎಂದರು.
ಇನ್ನು ಬಿಜೆಪಿ ನಾಯಕರು ರಾಜೀವ್ ಗಾಂಧಿ ಫೌಂಡೇಶನ್ ಗೆ ಚೀನಾ ರಾಯಭಾರ ಕಚೇರಿಯಿಂದ ಹಣ ಪಡೆದಿದ್ದಾರೆಂದು ಆರೋಪ ಮಾಡುತ್ತಿದ್ದಾರೆ. ಈಗ ಮೋದಿಯವರು ಪಿಎಂ ಕೇರ್ ಫಂಡ್ ಮಾಡಿದ್ದಾರೆ. ಇದು ಯಾವುದೇ ಸಂವಿಧಾನದಲ್ಲಿ ಇಲ್ಲ. ಚೀನಾದಿಂದ ಈಗ ಪಿಎಂ ಕೇರ್ ಫಂಡ್ ಗೆ ಹಣ ಪಡೆದಿದ್ದಾರೆ. ಪೆಟಿಎಂ, ಟಿಕ್ ಟಾಕ್ ಸೇರಿದಂತೆ ಚೀನಾ ಕಂಪನಿಯಿಂದ ನೂರಾರು ಕೋಟಿ ದೇಣಿಗೆ ಪಡೆದಿದ್ದಾರೆ. ಇದರ ವಿರುದ್ಧ ಹೋರಾಟ ಮಾಡಬೇಕಿದೆ. ತಂತ್ರಜ್ಞಾನ ಬಳಸಿಕೊಂಡು ಬಿಜೆಪಿ ವೈಫಲ್ಯ ತೋರಿಸಬೇಕಿದೆ ಎಂದು ಖರ್ಗೆ ಬಿಜೆಪಿ ವಿರುದ್ಧ ಗುಡುಗಿದರು.
ಕೊರೊನಾ ಸಂದರ್ಭದಲ್ಲಿ 20 ಲಕ್ಷ ಕೋಟಿ ಪರಿಹಾರ ನೀಡುತ್ತೇವೆ ಎನ್ನುತ್ತಾರೆ. ಆದರೆ, ಅದರಲ್ಲಿ ಕೇವಲ 1.75 ಲಕ್ಷ ಮಾತ್ರ ಹಣ ದೊರೆಯುತ್ತದೆ. ಇಂಥ ಕೆಟ್ಟ ಸರ್ಕಾರವನ್ನು ಕಿತ್ತೊಗೆಯದಿದ್ದರೆ ದೇಶದ ಯುವಕರಿಗೆ ಭವಿಷ್ಯವಿಲ್ಲ. ಮೋದಿ ಒಬ್ಬ ಮೋಸಗಾರ, ಬಿಜೆಪಿ ಮೋಸಗಾರ ಪಕ್ಷ. ಇದನ್ನ ಮೊದಲು ಓಡಿಸಬೇಕು. ಆರ್‌ಎಸ್‌ಎಸ್ ಐಡಿಯಾಲಜಿಯನ್ನ ಜನರಿಗೆ ತಿಳಿಸಬೇಕು. ಇಲ್ಲದೇ ಇದ್ದರೆ ಮೋದಿ ಮೋದಿ ಎನ್ನುವುದನ್ನ ಯುವಕರು ನಿಲ್ಲಿಸುವುದಿಲ್ಲ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.








