ರಾಮನಗರ : ನಿಖಿಲ್ ಕುಮಾರಸ್ವಾಮಿ ಅವರ ಮದುವೆಗೆ ರಾಮನಗರದಲ್ಲಿ ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಯುತ್ತಿದ್ದು, ನಿಖಿಲ್ ಕುಮಾರಸ್ವಾಮಿ ಅವರ ರಾಜಕೀಯ ಭವಿಷ್ಯ ಮದುವೆ ಬಳಿಕ ರಾಮನಗರ ಕ್ಷೇತ್ರದಿಂದಲೇ ಪುನರ್ ಆರಂಭವಾಗಲಿದೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಹೇಳಿದ್ದಾರೆ. ರಾಮನಗರದಲ್ಲಿ ಮಾತನಾಡಿದ ಅವರು, ಹಾಸನದಲ್ಲಿ ರೇವಣ್ಣ ಬಳಿಕ ಪ್ರಜ್ವಲ್ ರೇವಣ್ಣ ರಾಜಕೀಯ ನೆಲೆ ಕಂಡುಕೊಂಡರು. ರಾಮನಗರ ನನಗೆ ಹಾಗೂ ಕುಮಾರಸ್ವಾಮಿಗೆ ಕರ್ಮಭೂಮಿ ಆಯಿತು. ಈಗ ಇದೇ ಭೂಮಿ ನಿಖಿಲ್ ಗೆ ರಾಜಕೀಯ ನೆಲೆ ನೀಡುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ರಾಮನಗರ ನನಗೆ, ಕುಮಾರಸ್ವಾಮಿಗೆ ರಾಜಕೀಯ ಶಕ್ತಿಕೊಟ್ಟ ಸ್ಥಳ. ಇಲ್ಲಿಂದಲೇ ನಾನು ಸಿಎಂ ಆಗಿ ಪ್ರಧಾನಿಯಾದೆ. ನಮ್ಮ ವಂಶಕ್ಕೆ ರಾಜಕೀಯದಲ್ಲಿ ಎರಡನೇ ಶಕ್ತಿ ಕೊಟ್ಟ ಸ್ಥಳವಿದು. ಇಲ್ಲಿಂದಲೇ ನಿಖಿಲ್ ಕೂಡ ರಾಜಕೀಯವಾಗಿ ಬೆಳೆಯಬೇಕು ಎಂಬುದು ನಮ್ಮ ಉದ್ದೇಶ ಎಂದು ಹೆಚ್ ಡಿಡಿ ವಿವರಿಸಿದರು.








