ಬೆಂಗಳೂರು: ಮುಂದಿನ ದಿನಗಳಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದು, ಜನರ ಭಾವನೆಗೆ ತಕ್ಕಂತೆ ರಾಜ್ಯವನ್ನು ಅಭಿವೃದ್ಧಿಯತ್ತ ನಡೆಸುವುದು ನಮ್ಮ ಗುರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಎಂ.ಬಿ ಪಾಟೀಲ್ ಅವರನ್ನು ಭೇಟಿಯಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿನೇಶ್ ಗುಂಡೂರಾವ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ರಾಜ್ಯಕ್ಕೆ ವೀಕ್ಷಕರು ಆಗಮಿಸಿದ್ದರು. ನನಗೆ ಗೊತ್ತಿಲ್ಲದೆ ಎಂ.ಬಿ.ಪಾಟೀಲ್ ಸೇರಿದಂತೆ ಶೇ.99ರಷ್ಟು ಭಾಗ ಬಹುತೇಕ ಎಲ್ಲರೂ ಡಿ.ಕೆ. ಶಿವಕುಮಾರ್ ಅಧ್ಯಕ್ಷರಾಗಬೇಕು ಎಂದು ಸೂಚಿಸಿದ್ದಾರೆ. ಇದು ಸತ್ಯ ಎಂದರು.
ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿ ಇತ್ತು ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಮಾಧ್ಯಮ ಸ್ನೇಹಿತರು ಏನೇನೋ ಸೃಷ್ಟಿ ಮಾಡಿದ್ದಿರಿ. ನಮ್ಮಲ್ಲಿ ಯಾವುದೇ ರೀತಿಯ ಸ್ಪರ್ಧೆ, ಭಿನ್ನಾಭಿಪ್ರಾಯ ಇರಲಿಲ್ಲ. ಪಾಪ ನಿಮಗೆ ಯಾರೋ ಮಾಹಿತಿ ನೀಡಿದ್ದಾರೆ ಅಂತಾ ನೀವು ಸುದ್ದಿ ಮಾಡಿದ್ದೀರಿ. ಈ ಊಹಾಪೋಹಗಳಿಗೆ ಸೂಕ್ತ ಕಾಲದಲ್ಲಿ ತೆರೆ ಎಳೆಯಬೇಕು ಎಂಬುದು ನಮ್ಮ ಅಭಿಪ್ರಾಯ. ಹೀಗಾಗಿಯೇ ಇವತ್ತು ಈ ಬಗ್ಗೆ ಮಾತನಾಡುತ್ತಿದ್ದೇವೆ. ನಮ್ಮಲ್ಲಿ ಯಾವುದೇ ವ್ಯಕ್ತಿಗತ ವಿಚಾರವಿಲ್ಲ. ಸಿದ್ಧಾಂತದ ಆಧಾರದ ಮೇಲೆ ನಾವು ಪಕ್ಷದಲ್ಲಿ ಇದ್ದೇವೆ ಎಂದು ಹೇಳಿದ್ದಾರೆ.









