ಬೆಂಗಳೂರು : ಲಡಾಖ್ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ನಡೆದ ಚೀನಾ ಮತ್ತು ಭಾರತದ ನಡುವೆ ಘರ್ಷಣೆಯಲ್ಲಿ 20 ಮಂದಿ ಭಾರತೀಯ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯ ಗಡಿಯಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದ್ದು, ದೇಶದೆಲ್ಲೆಡೆ ಇದೇ ವಿಚಾರವಾಗಿ ಚರ್ಚೆ ಆಗುತ್ತಿದೆ. ಏತನ್ಮಧ್ಯೆ ಚೀನಾ ಮತ್ತು ಭಾರತದ ಘರ್ಷಣೆ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು,
ಭಾರತ ಹಾಗೂ ಚೀನಾ ನಡುವೆ ಯುದ್ಧ ಸಂಘರ್ಷವಾಗಿದ್ದು, ಇಡೀ ವಿಶ್ವ ಹಾಗೂ ಎರಡು ದೇಶಗಳಿಗೂ ಉತ್ತಮ ಬೆಳವಣಿಗೆ ಅಲ್ಲ ಎಂದು ಹೇಳಿದ್ದಾರೆ.
ದೇವನಹಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿ, ಭಾರತ ಹಾಗೂ ಚೀನಾ ನಡುವಿನ ಸಂಘರ್ಷ ದುರದೃಷ್ಟಕರ ವಿಚಾರವಾಗಿದೆ. ಈಗಾಗಲೇ ದೇಶದಲ್ಲಿ ಕೋವಿಡ್ 19 ಸಮಸ್ಯೆಗಳಿಂದ ಜನಸಾಮಾನ್ಯರು ಆತಂಕದಲ್ಲಿದ್ದಾರೆ. ಈ ವೇಳೆ ನಮ್ಮ ದೇಶ ಮತ್ತು ಚೀನಾ ದೇಶದ ನಡುವೆ ಸಂಘರ್ಷ ನಡೆಯುವಂತ ವಾತಾವರಣ ನಿರ್ಮಾಣವಾಗಿದೆ. ಇದು ಇಡೀ ವಿಶ್ವ ಹಾಗೂ ಎರಡು ದೇಶಗಳಿಗೂ ಉತ್ತಮ ಬೆಳವಣಿಗೆ ಅಲ್ಲ ಎಂದರು.
ಭಾರತ ಹಾಗೂ ಚೀನಾ ಎರಡು ದೇಶದ ಪ್ರಧಾನಮಂತ್ರಿಗಳಿಗೆ ನಾನು ಮನವಿ ಮಾಡುತ್ತೇನೆ. ಅದೇನೆಂದರೆ ಇಂತಹ ಸನ್ನಿವೇಶದಲ್ಲಿ ಪರಸ್ಪರ ಅವಿಶ್ವಾಸದ ಹಿನ್ನೆಲೆಯಲ್ಲಿ ಅಥವಾ ಬೇರೆ ಬೇರೆ ಕಾರಣದಿಂದ ಯುದ್ಧದ ವಾತಾವರಣ ನಿರ್ಮಾಣ ಮಾಡುವುದು ಬೇಡ. ಇದರಿಂದ ಒಂದು ಕಡೆ ಅಮಾಯಕ ಯೋಧರ ಬಲಿಯಾಗುತ್ತಿದ್ದಾರೆ. ಮತ್ತೊಂದು ಕಡೆ ಎರಡು ದೇಶಗಳ ನಡುವಿನ ಸಾಮರಸ್ಯ ಹಾಳುಮಾಡುವುದು ಬೇಡ ಎಂದು ಮನವಿ ಮಾಡಿಕೊಂಡರು.
ಇದೇ ವೇಳೆ ಪ್ರಧಾನಿ ಬಗ್ಗೆ ಮಾತನಾಡಿದ ಅವರು, ಈಗ ನಮ್ಮ ದೇಶದ ಪ್ರಧಾನಿ ಇಡೀ ವಿಶ್ವದಲ್ಲೇ ಬಲಾಢ್ಯ ಪ್ರಧಾನಿ ಅಂತ ಚರ್ಚೆಯಾಗುತ್ತಿದೆ. ಇವತ್ತು ಬಲಾಢ್ಯತೆ ಹೊಂದುವುದು ಬೇರೆ. ಶಾಂತಿಯುತವಾಗಿ ಅಕ್ಕಪಕ್ಕದ ದೇಶಗಳ ಜೊತೆ ವಿಶ್ವಾಸ ಮೂಡಿಸಿಕೊಂಡು ಕೆಲಸ ಮಾಡಬೇಕು. ದಬ್ಬಾಳಿಕೆಯಿಂದ ಚೀನಾದವರು ನಮ್ಮ ದೇಶವನ್ನು ಬಗ್ಗು ಬಡಿಯಲು ಸಾಧ್ಯವಿಲ್ಲ. ನಮ್ಮ ದೇಶದ ಸೈನಿಕರು ಎಲ್ಲ ರೀತಿಯಲ್ಲಿ ಸಮರ್ಥರಿದ್ದಾರೆ. ನಮ್ಮ ದೇಶದ ಸೈನಿಕರ ಸಾಹಸ ಬೇರೆ ದೇಶಗಳ ಸೈನಿಕರಿಗೆ ಏನು ಕಡಿಮೆಯಿಲ್ಲ. ನಮ್ಮ ದೇಶದ ರಕ್ಷಣಾ ವ್ಯವಸ್ಥೆಯನ್ನ ಚೀನಾ ಹುಡುಗಾಟಿಕೆ ಅಂತ ಪರಿಗಣಿಸೋದು ಬೇಡ ಎಂದು ಕುಮಾರಸ್ವಾಮಿ ಹೇಳಿದರು.








