ನಾಯಕ ವಿರಾಟ್ ನಂಬಿಕೆಯನ್ನು ಹುಸಿಗೊಳಿಸಿದ ಪೃಥ್ವಿ ಶಾ..!
ಪೃಥ್ವಿ ಶಾ.. ಟೀಮ್ ಇಂಡಿಯಾದ ಭವಿಷ್ಯದ ಆಟಗಾರ ಅನ್ನೋ ಭರವಸೆ ಮೂಡಿಸಿದ್ದ ಕ್ರಿಕೆಟಿಗ.
ಪೃಥ್ವಿ ಶಾ 19 ವಯೋಮಿತಿ ವಿಶ್ವಕಪ್ ಗೆದ್ದಾಗಲೇ ಮುಂದೊಂದು ದಿನ ಟೀಮ್ ಇಂಡಿಯಾದಲ್ಲಿ ಆಡುತ್ತಾನೆ ಅಂತ ಅನೇಕ ಕ್ರಿಕೆಟ್ ಪಂಡಿತರು ಭವಿಷ್ಯ ನುಡಿದಿದ್ದರು.
ಅದೇ ರೀತಿ 2018ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವನ್ನು ಪೃಥ್ವಿ ಶಾ ಆಡಿದ್ದರು. ನಂತರ ಗಾಯದಿಂದಾಗಿ ತಂಡದಿಂದ ಹೊರನಡೆದಿದ್ದರು. ಬಳಿಕ ಉದ್ದೀಪನಾ ದ್ರವ್ಯ ಸೇವನೆ ಆರೋಪಕ್ಕೆ ಸಿಲುಕಿ ಸುಮಾರು ಆರೇಳು ತಿಂಗಳು ಕ್ರಿಕೆಟ್ ನಿಂದ ದೂರವೇ ಉಳಿದಿದ್ದರು.
ಹೀಗಾಗಿ ಕಳೆದ ಎರಡು ವರ್ಷಗಳಲ್ಲಿ ಪೃಥ್ವಿ ಶಾ ಆಡಿದ್ದ ಟೆಸ್ಟ್ ಪಂದ್ಯ ಬರೀ ಐದು ಮಾತ್ರ. ಆಡಿರುವ ಎಂಟು ಇನಿಂಗ್ಸ್ ಗಳಲ್ಲಿ ಒಂದು ಶತಕ ಹಾಗೂ ಎರಡು ಅರ್ಧಶತಕಗಳನ್ನು ಸಿಡಿಸಿದ್ದರು. ಸರಾಸರಿ 55.83ರಂತೆ ರನ್ ಕೂಡ ಪೇರಿಸಿದ್ದರು.
ಆದ್ರೆ ಕಳೆದ ಐಪಿಎಲ್ ನಲ್ಲಿ ಪೃಥ್ವಿ ಶಾ ನೀರಸ ಪ್ರದರ್ಶನ ನೀಡಿದ್ದರು. ಹೀಗಾಗಿ ಟೀಮ್ ಇಂಡಿಯಾದೊಳಗೆ ಪ್ರವೇಶ ಸಿಗೋದು ಕೂಡ ಕಷ್ಟವಾಗಿತ್ತು.
ಆದ್ರೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಪೃಥ್ವಿ ಶಾ ಅವರನ್ನು ಆಯ್ಕೆ ಮಾಡಲಾಗಿತ್ತು.
ಆದ್ರೆ ಆಡಿಲೇಡ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಪೃಥ್ವಿ ಶಾ ಶೂನ್ಯಕ್ಕೆ ಔಟಾಗಿದ್ದಾರೆ.ನಾಯಕ ವಿರಾಟ್ ಕೊಹ್ಲಿಯ ನಂಬಿಕೆಯನ್ನು ಪೃಥ್ವಿ ಶಾ ಹುಸಿಗೊಳಿಸಿದ್ದಾರೆ.
ಹಾಗೇ ನೋಡಿದ್ರೆ, ಪೃಥ್ವಿ ಶಾ ಅವರ ಆಯ್ಕೆಯ ಬಗ್ಗೆ ಮಾಜಿ ಕ್ರಿಕೆಟರ್ ಗಳಾದ ಸುನೀಲ್ ಗವಾಸ್ಕರ್ ಹಾಗೂ ಆಲನ್ ಬಾರ್ಡರ್ ಕೂಡ ವಿರೋಧ ವ್ಯಕ್ತಪಡಿಸಿದ್ದರು.
ಆದ್ರೂ ವಿರಾಟ್ ಕೊಹ್ಲಿ ಪೃಥ್ವಿ ಅವರ ಪ್ರತಿಭೆ ಮತ್ತು ಸಾಮಥ್ರ್ಯದ ಮೇಲೆ ನಂಬಿಕೆಯನ್ನಿಟ್ಟುಕೊಂಡು ಅವಕಾಶ ನೀಡಿದ್ರು.
ಆದ್ರೂ ಶಾ ಕೆಟ್ಟ ಫಾರ್ಮ್ ನಿಂದಾಗಿ ಎಡವಿಬಿದ್ರು. ಹಾಗೇ ನೋಡಿದ್ರೆ, ಪೃಥ್ವಿ ಶಾ ಅವರ ಬ್ಯಾಟಿಂಗ್ ಕೌಶಲ್ಯಗಳ ಬಗ್ಗೆ ಮಾತನಾಡುವ ಹಾಗಿಲ್ಲ. ಸಚಿನ್, ಪಾಂಟಿಂಗ್ ಮತ್ತು ಬ್ರಿಯಾನ್ ಲಾರಾ ಬ್ಯಾಟಿಂಗ್ ತಾಂತ್ರಿಕತೆಗಳನ್ನು ಪೃಥ್ವಿ ಶಾ ಅವರ ಬ್ಯಾಟಿಂಗ್ ಶೈಲಿಯಲ್ಲಿ ನೋಡಬಹುದಾಗಿದೆ.
ಆದ್ರೆ ಸದ್ಯ ಪೃಥ್ವಿ ಶಾ ಅವರು ಈ ದಂತಕತೆಗಳ ಹಾಗೇ ಕ್ರಿಕೆಟ್ ಮೇಲೆ ಬದ್ಧತೆಯನ್ನು ಹೊಂದಿಲ್ಲ ಅನ್ನೋ ಟೀಕೆಗಳು ಕೂಡ ಕೇಳಿಬರುತ್ತಿವೆ.
ಒಟ್ಟಿನಲ್ಲಿ ಪೃಥ್ವಿ ಶಾ ಅವರು ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಹೀಗೆ ಮುಂದುವರಿದ್ರೆ ಪೃಥ್ವಿ ಶಾ ಮತ್ತೊಬ್ಬ ವಿನೋದ್ ಕಾಂಬ್ಳಿಯಾದ್ರೂ ಅಚ್ಚರಿ ಏನಿಲ್ಲ. ಆದ್ರೆ ಕಾಂಬ್ಳಿ ರೀತಿ ಪೃಥ್ವಿ ಶಾ ಪ್ರತಿಭೆ ಹಾಳಾಗೋದು ಬೇಡ.