ಬೆಂಗಳೂರಲ್ಲಿ ಪುಂಡರ ಪುಂಡಾಟ: ಕಾವಲ್ ಭೈರಸಂದ್ರದಲ್ಲಿರುವ ಶಾಸಕ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು
ಬೆಂಗಳೂರಿನ ಪುಲಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆ ಮೇಲೆ ಪುಂಡರು ಕಲ್ಲು ತೂರಾಟ ನಡೆಸಿದ್ದಾರೆ. ಅಖಂಡ ಶ್ರೀನಿವಾಸ್ ಮೂರ್ತಿ ಅವರ ಸೋದರ ಅಳಿಯ ನವೀನ್ ಅವರು ತನ್ನ ಫೇಸ್ ಬುಕ್ ನಲ್ಲಿ ಒಂದು ಸಮುದಾಯದ ವಿರುದ್ಧವಾಗಿ ಪೋಸ್ಟರ್ ಹಾಕಿದ್ದರು. ಇದ್ರಿಂದ ಆಕ್ರೋಶಗೊಂಡ ಸಮುದಾಯ ಸುಮಾರು 100ಕ್ಕೂ ಅಧಿಕ ಮಂದಿ ಅಖಂಡ ಶ್ರೀನಿವಾಸ್ ಮೂರ್ತಿ ಮನೆಯ ಎದುರು ದಾಂಧಲೆ ನಡೆಸಿದ್ದಾರೆ. ಶಾಸಕರ ಕಾರು ವಾಹನಗಳಿಗೂ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.
ಈ ನಡುವೆ ಅಖಂಡ ಶ್ರೀನಿವಾಸ್ ಮೂರ್ತಿಯವರು ಮೊಬೈಲ್ ವಿಡಿಯೋ ಮೂಲಕ ಸಮಾಧಾನಪಡಿಸಲು ಯತ್ನಿಸಿದ್ರೂ ಪ್ರಯೋಜನವಾಗಿಲ್ಲ. ತಪ್ಪು ಯಾರೇ ಮಾಡಿದ್ರೂ ಶಿಕ್ಷೆಯಾಗಲಿ. ಆದ್ರೆ ಈ ರೀತಿ ರಸ್ತೆಯಲ್ಲಿ ನಿಂತು ಗಲಾಟೆ ಮಾಡಬೇಡಿ. ಶಾಂತಿಯಿಂದ ಮಾತುಕತೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳೋಣ ಎಂದು ಮನವಿ ಮಾಡಿಕೊಂಡಿದ್ದಾರೆ.
ಆದ್ರೆ ಪುಂಡರು ಅಕ್ಕಪಕ್ಕದ ಮನೆಗಳ ಮೇಲೂ ಕಲ್ಲು ತೂರಾಟ ನಡೆಸಿದ್ದಾರೆ. ಕಾರು ಸೇರಿದಂತೆ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ರೂ ಉದ್ರಿಕ್ಷ ಜನರನ್ನು ಹತೋಟಿಗೆ ತರಲು ಸಾಧ್ಯವಾಗಿಲ್ಲ. ಅಲ್ಲದೆ ಕೆ,ಜಿ. ಹಳ್ಳಿಯ ಪೊಲೀಸ್ ಠಾಣೆಯ ಎದುರು ರಂಪಾಟ ಮಾಡುತ್ತಿದ್ದಾರೆ.
ಇದೀಗ ಬೆಂಗಳೂರು ಪೊಲೀಸ್ ಕಮೀಷನರ್ ಸ್ಥಳಕ್ಕೆ ಆಗಮಿಸಿದ್ದಾರೆ. ಎಲ್ಲಾ ಡಿವಿಷನ್ ನ ಪೊಲೀಸರಿಗೆ ಸ್ಥಳಕ್ಕೆ ಆಗಮಿಸುವಂತೆ ಸೂಚನೆ ನೀಡಲಾಗಿದೆ.
ಇನ್ನೊಂದೆಡೆ ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಖಾನ್ ಅವರು ಸ್ಥಳಕ್ಕೆ ಆಗಮಿಸಿದ್ದಾರೆ. ಈ ಘಟನೆಯ ವೇಳೆ ಶಾಸಕರು ಮನೆಯಲ್ಲಿರಲಿಲ್ಲ.
ಒಟ್ಟಿನಲ್ಲಿ ಬೆಂಗಳೂರಿನಲ್ಲಿ ಜನಪ್ರತಿನಿಧಿಗಳಿಗೆ ರಕ್ಷಣೆ ಇಲ್ಲ. ಒಬ್ಬ ಜನಪ್ರತಿನಿಧಿಯ ಮನೆಗೆ ಬೆಂಕಿ ಹಚ್ಚಲು ಮುಂದಾಗ್ತಾರೆ ಅಂದ್ರೆ ಜನ ಸಾಮಾನ್ಯರ ಗತಿ ಏನು ಎಂಬುದು ಪ್ರಶ್ನೆಗೆ ಉತ್ತರ ನೀಡೋರು ಯಾರು ?








