ಕೊರೊನಾ, ಜಿಡಿಪಿ, ಚೀನಾ ವಿಚಾರದಲ್ಲಿ ಕೇಂದ್ರ ಸುಳ್ಳು ಹೇಳುತ್ತಿದೆ : ರಾಹುಲ್ ಗಾಂಧಿ
ನವದೆಹಲಿ : ಕೊರೊನಾ ವೈರಸ್, ಜಿಡಿಪಿ ಮತ್ತು ಚೀನಾ ವಿಚಾರದಲ್ಲಿ ದತ್ತಾಂಶಗಳನ್ನು ಮರೆಮಾಚಿ ಕೇಂದ್ರ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಮೂರು ವಿಷಯಗಳ ಬಗ್ಗೆ ಗಮನ ಸೆಳೆದಿದ್ದು, 1. ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಕುರಿತು ಬಿಜೆಪಿ ತಪ್ಪು ಅಂಕಿ ಅಂಶಗಳನ್ನು ನೀಡುತ್ತಿದೆ. ಪರೀಕ್ಷೆಗಳನ್ನು ಹೆಚ್ಚು ನಡೆಸುತ್ತಿಲ್ಲ. ಅಲ್ಲದೆ ಸಾವಿನ ಸಂಖ್ಯೆಯ ವರದಿಯನ್ನು ಸಹ ತಪ್ಪಾಗಿ ನೀಡುತ್ತಿದೆ.
2. ಹೊಸ ಲೆಕ್ಕಾಚಾರ ಲೆಕ್ಕಾಚಾರ ವಿಧಾನದ ಮೂಲಕ ಜಿಡಿಪಿಯಲ್ಲಿ ಸಹ ಬಿಜೆಪಿ ಸುಳ್ಳನ್ನು ಸತ್ಯವೆಂದು ಹೇಳುತ್ತಿದೆ. 3. ಮಾಧ್ಯಮಗಳನ್ನು ಹೆದರಿಸುವ ಮೂಲಕ ಚೀನಾದ ಆಕ್ರಮಣಶೀಲತೆ ಬಗ್ಗೆ ಬಿಜೆಪಿ ಸುಳ್ಳುಗಳನ್ನು ಸತ್ಯವೆಂದು ಬಿಂಬಿಸುತ್ತಿದೆ ಎಂದು ಆರೋಪಿಸಿ, ಈ ಭ್ರಮೆ ಶೀಘ್ರದಲ್ಲೇ ಬಯಲಾಗಲಿದ್ದು, ಭಾರತ ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.ಅಲ್ಲದೆ ಟ್ವೀಟ್ ಜೊತೆಗೆ ಅಂತಾರಾಷ್ಟ್ರೀಯ ಪ್ರಕಟಣೆಯ ಲೇಖನವೊಂದನ್ನೂ ಲಗತ್ತಿಸಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ಚೀನಾ-ಭಾರತ ವಿವಾದಕ್ಕೆ ಸಂಬಂಧಿಸಿದಂತೆ ಸಣ್ಣ ವಿಡಿಯೋ ಒಂದನ್ನು ಬಿಡುಗಡೆ ಮಾಡಿರುವ ರಾಹುಲ್ ಗಾಂಧಿ, 2014ರಿಂದ ಪ್ರಧಾನಿ ನರೇಂದ್ರ ಮೋದಿಯವರ ‘ನಿರಂತರ ಪ್ರಮಾದಗಳು ಮತ್ತು ವಿವೇಚನೆಗಳು’ ದೇಶವನ್ನು ಮೂಲಭೂತವಾಗಿ ದುರ್ಬಲಗೊಳಿಸಿವೆ ಎಂದು ಹೇಳಿದ್ದಾರೆ.








