ನವದೆಹಲಿ: ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಮಂದಿರ ನಿರ್ಮಾಣ ಮಾಡುವ ಕಾರ್ಯಕ್ಕೆ ತ್ವರಿತ ಗತಿಯ ಸಿದ್ಧತೆಗಳು ನಡೆಯುತ್ತಿದ್ದು, ಈಗಾಗಲೇ ರಾಮಮಂದಿರ ನಿರ್ಮಾಣ ಟ್ರಸ್ಟ್ ರಚನೆಯಾಗಿದೆ. ಇದೀಗ ಮಂದಿರ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಲು ತಯಾರಿ ನಡೆದಿದ್ದು, ಇದೇ ವಿಚಾರವಾಗಿ ಟ್ರಸ್ಟ್ ನ ಸದಸ್ಯರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.
ರಾಮಮಂದಿರ ಟ್ರಸ್ಟ್ ರಚನೆಯಾದ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಟ್ರಸ್ಟ್ ನ ಸದಸ್ಯರು ಭೇಟಿ ಮಾಡಿದ್ದರು. ಈ ವೇಳೆ ಟ್ರಸ್ಟ್ ಸದಸ್ಯರು ಒಂದು ಗಂಟೆ ಕಾಲ ಪ್ರಧಾನಿ ಜೊತೆ ಚರ್ಚೆ ನಡೆಸಿದ್ದಾರೆ. ಅಲ್ಲದೆ, ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಥಳದ ಭೂಮಿ ಪೂಜೆಗೆ ಬರುವಂತೆ, ಮೋದಿ ಅವರನ್ನು ಆಹ್ವಾನಿಸಿದ್ದಾರೆ ಎಂದು ಮೂಲಗಳ ತಿಳಿಸಿವೆ. ಮೋದಿಯವರು ನೀಡುವ ಸಮಯಕ್ಕೆ ತಕ್ಕಂತೆ, ಭೂಮಿ ಪೂಜೆಯ ದಿನಾಂಕವನ್ನು ಹೊಂದಾಣಿಕೆ ಮಾಡಲು ಟ್ರಸ್ಟ್ ನ ಸದಸ್ಯರು ನಿರ್ಧರಿಸಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ಟ್ರಸ್ಟ್ ನ ಅಧ್ಯಕ್ಷ ನಿತ್ಯ ಗೋಪಾಲ್ ದಾಸ್, ಪ್ರಧಾನಿ ನರೇಂದ್ರಯವರನ್ನು ಮಂದಿರದ ಭೂಮಿ ಪೂಜೆಗೆ ಆಹ್ವಾನಿಸಿದ್ದೇವೆ. ಅವರು ಬರುವುದಾಗಿ ನಮಗೆ ತಿಳಿಸಿದ್ದಾರೆ ಎಂದರು.