ಚಿತ್ರದುರ್ಗ : ರಾಜ್ಯದಲ್ಲಿ ಲಾಕ್ ಡೌನ್ ನಡುವೆ ಕೊರೊನಾಸುರ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ದಿನದಿಂದ ದಿನಕ್ಕೆ ನೂರಾರು ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಈ ನಡುವೆ ಜನರಿಗೆ ಮಾದರಿಯಾಗಬೇಕಾದ ಆರೋಗ್ಯ ಸಚಿವ ಶ್ರೀರಾಮುಲು ಕೋವಿಡ್ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ನೂರಾರು ಕಾರ್ಯಕರ್ತರೊಂದಿಗೆ ಬೃಹತ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶ್ರೀರಾಮುಲು ಸೇಬಿನ ಹಾರ ಹಾಕಿಸಿಕೊಂಡಿದ್ದಾರೆ.
ಹೌದು..! ಇಂದು ಸಚಿವ ಶ್ರೀ ರಾಮುಲು ಚಳ್ಳಕೆರೆ ತಾಲೂಕಿನ ಪರಶುರಾಂಪುರ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಶ್ರೀರಾಮುಲು, ಎತ್ತಿನ ಗಾಡಿ ಏರಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಪಾಲಿಸದೆ ನೂರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ಮಾಡಿದ್ದಾರೆ.
ಸಚಿವರಿಗೆ ಸಂಸದ ಎ.ನಾರಾಯಣಸ್ವಾಮಿ, ಚಿತ್ರದುರ್ಗ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಸಹ ಸಾಥ್ ನೀಡಿದ್ದರು. ಆದ್ರೆ ಇಲ್ಲಿ ಯಾರೊಬ್ಬರೂ ಮಾಸ್ಕ್ ಧರಿಸಿರಲಿಲ್ಲ. ಸಾಮಾಜಿಕ ಅಂತರವಂತೂ ಎಲ್ಲೂ ಕಾಣಲೇ ಇಲ್ಲ. ಅಲ್ಲದೆ ಮೆರವಣಿಗೆ ವೇಳೆ ನೂರಾರು ಜನರ ಮಧ್ಯೆ ಸಚಿವರಿಗೆ ಕಾರ್ಯಕರ್ತರು ಕ್ರೇನ್ ಮೂಲಕ ಸೇಬಿನ ಹಾರ, ಜೆಸಿಬಿ ಮೂಲಕ ಹೂವು ಹಾಕಿದ್ದಾರೆ. ಸ್ವತಃ ಸಚಿವರು ಲಾಕ್ ಡೌನ್ ನಿಯಮಗಳನ್ನು ಗಾಳಿಗೆ ತೂರಿದ್ದು, ಮಾತ್ರವಲ್ಲದೆ ಸಚಿವರ ಸಮ್ಮುಖದಲ್ಲೇ ನೂರಾರು ಜನ ಕಾನೂನನ್ನು ಮರೆತಿದ್ದಾರೆ.








