ಕೋಲಾರ: ಕಳೆದ ನಾಲ್ಕು ತಿಂಗಳಿಂದ ವೇತನ ನೀಡದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಕಾರ್ಮಿಕರು ವಿಸ್ತ್ರಾನ್ ಕಾರ್ಖಾನೆಯ ಮೇಲೆ ಕಲ್ಲು ತೂರಾಟ ನಡೆಸಿ, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಲಾರ ಜಿಲ್ಲೆ ನರಸಾಪುರದ ಕೈಗಾರಿಕಾ ಪ್ರದೇಶದಲ್ಲಿರುವ ಐಫೋನ್ ತಯಾರಿಕಾ ಕಂಪನಿಯ ಕಾರ್ಖಾನೆಯಲ್ಲಿ ಈ ಘಟನೆ ನಡೆದಿದೆ. ಕಂಪನಿ ತನ್ನ ಕಾರ್ಮಿಕರಿಗೆ ಕಳೆದ ನಾಲ್ಕು ತಿಂಗಳಿಂದ ವೇತನ ನೀಡಿಲ್ಲ ಎಂದು ಆರೋಪಿಸಿರುವ ಕಾರ್ಮಿಕರು, ಕಂಪನಿಯ ಕಟ್ಟಡದ ಗಾಜುಗಳ ಮೇಲೆ ಕಲ್ಲು ತೂರಾಟ ನಡೆಸಿ ಪುಡಿ ಪುಡಿ ಮಾಡಿದ್ದಲ್ಲದ್ದೆ, ಕಾರ್ಖಾನೆ ಆವರಣದಲ್ಲಿದ್ದ ಕಾರುಗಳ ಗಾಜುಗಳನ್ನು ಪುಡಿ ಮಾಡಿ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.
ನಿತ್ಯ ಕಾರ್ಮಿಕರಿಂದ 10 ಗಂಟೆ ಕೆಲಸ ಮಾಡಿಸಿಕೊಳ್ಳುತ್ತಿದ್ದ ಕಂಪನಿ, ಕೇವಲ 12 ಸಾವಿರ ವೇತನ ನೀಡುತ್ತಿತ್ತು ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಜತೆಗೆ ಕೆಲಸದ ಒತ್ತಡ ಹಾಗೂ ಸರಿಯಾಗಿ ಸಂಬಳವಿಲ್ಲದೆ ಆತಂಕಗೊಂಡಿದ್ದ ಕಾರ್ಮಿಕರ ಆಕ್ರೋಶದ ಕಟ್ಟೆಯೊಡೆದಿದೆ.
ಇಂದು ಬೆಳಿಗ್ಗೆ ಶಿಫ್ಟ್ ಬದಲಾವಣೆ ವೇಳೆ ಎರಡು ಶಿಫ್ಟ್‍ನ ಕಾರ್ಮಿಕರ ಕಿಚ್ಚಿಗೆ ಕಂಪನಿ ಧ್ವಂಸಗೊಂಡಿದೆ. ಕಾರ್ಖಾನೆಯಲ್ಲಿ 2 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕಾರ್ಮಿಕರ ಆಕ್ರೋಶಕ್ಕೆ ಕಚೇರಿಯ ಪೀಠೋಪಕರಣಗಳು ಧ್ವಂಸಗೊಂಡಿವೆ.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ವೇಮಗಲ್ ಪೊಲೀಸರು, ಪರಿಸ್ಥಿತಿ ನಿಯಂತ್ರಣಕ್ಕೆ ಹರಸಾಹಸ ಪಟ್ಟಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಕಾರ್ಮಿಕರ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel