ಬೆಂಗಳೂರು: ಡ್ರಗ್ಸ್ ಜಾಲದ ಬೆಂಕಿಯಲ್ಲಿ ಮೈಕಾಯಿಸಿಕೊಂಡ ಸ್ಯಾಂಡಲ್‍ವುಡ್ ಮಂದಿಯ ಹೆಸರು ಅಧಿಕೃತವಾಗಿ ಬಹಿರಂಗವಾಗದೇ ಇದ್ದರೂ, ಆರೋಪ ಪ್ರತ್ಯಾರೋಪಗಳಲ್ಲಿ ಕೆಲವರ ಹೆಸರು ತೇಲಿ ಬರುತ್ತಿವೆ.
ಹೀಗಾಗಿ ಡ್ರಗ್ಸ್ ಜಾಲದಲ್ಲಿ ತೇಲಾಡಿದ ನಟ-ನಟಿಯರು, ನಿರ್ಮಾಪಕರು, ಸಂಗೀತ ನಿರ್ದೇಶಕರ ಬುಡಕ್ಕೆ ಬಿಸಿ ನೀರು ಬಿಟ್ಟಂತಾಗಿದೆ. ಕೆಲವರು ಸ್ಯಾಂಡಲ್‍ವುಡ್ ಮಂದಿ ಡ್ರಗ್ಸ್ ದಾಸರಾಗಿದ್ದಾರೆ ಎಂದರೆ, ಮತ್ತೆ ಕೆಲವರು ಇಲ್ಲವೇ ಇಲ್ಲ ಎನ್ನುತ್ತಿದ್ದಾರೆ. ಹಾಗಾದ್ರೆ ಯಾರ್ಯಾರು ಎನಂದ್ರು ಅನ್ನೋದರ ಡೀಟೇಲ್ಸ್ ಕೆಳಗಿನಂತಿದೆ.
ಶ್ರೀನಗರ ಕಿಟ್ಟಿ ಡ್ರಗ್ಸ್ ದಾಸರಾ..!
ಕನ್ನಡದ ಖ್ಯಾತ ಪತ್ರಕರ್ತರೊಬ್ಬರ ಸಂಬಂಧಿ ಡ್ರಗ್ಸ್ ತಗೋತ್ತಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಬಾಂಬ್ ಸಿಡಿಸಿದ್ದರು. ಇಂದ್ರಜಿತ್ ಲಂಕೇಶ್ ಹೇಳಿದ್ದು ಹಿರಿಯ ಪತ್ರಕರ್ತ ರವಿ ಬೆಳಗೆರೆ ಅಳಿಯ ಶ್ರೀನಗರ ಕಿಟ್ಟಿ ಅವರ ಬಗ್ಗೆ ಅನ್ನೋ ಗುಸುಗುಸು ಶುರುವಾಗಿತ್ತು. ಈ ಗುಸುಗುಸು ಸುದ್ದಿಗೆ ಶ್ರೀನಗರ ಕಿಟ್ಟಿ ಕೆಂಡಾಮಂಡಲರಾಗಿದ್ದಾರೆ. ತಮ್ಮ ವಿರುದ್ಧ ಬಂದಿರುವ ಆರೋಪಗಳನ್ನು ಶ್ರೀನಗರ ಕಿಟ್ಟಿ ತಳ್ಳಿ ಹಾಕಿದ್ದಾರೆ.
ಗಡ್ಡ ಬೋಳಿಸಿಕೊಳ್ಳುವೆ ಅಂದ್ರು ರವಿ ಬೆಳಗೆರೆ..!
ಸ್ಯಾಂಡಲ್‍ವುಡ್‍ನ ಡ್ರಗ್ಸ್ ಜಾಲದಲ್ಲಿ ಶ್ರೀನಗರ ಕಿಟ್ಟಿ ಹೆಸರು ಕೇಳಿ ಬರುತ್ತಿದ್ದಂತೆ ಮಾತನಾಡಿದ ಹಿರಿಯ ಪತ್ರಕರ್ತ ರವಿ ಬೆಳಗೆರೆ, ನಮ್ಮ ಮಕ್ಕಳು ಯಾವ ತಪ್ಪು ಮಾಡಿಲ್ಲ. ಕಿಟ್ಟಿ ನಮ್ಮ ಕುಟುಂಬದ ಒಳ್ಳೆಯ ಹುಡುಗ. ಆತನ ವಿರುದ್ಧ ಮಾಡಿದ ಆರೋಪ ನಿಜವಾದ್ರೆ ನನ್ನ ಗಡ್ಡ ಬೋಳಿಸಿಕೊಳ್ಳುವೆ ಎಂದು ಸವಾಲು ಹಾಕಿದ್ದಾರೆ.
ಇಂದ್ರಜಿತ್ ಯಾರವನು ಎಂದ ರವಿ ಬೆಳಗೆರೆ, ಅವರ ತಂದೆ ಲಂಕೇಶ್. ಈತ ಬರೀ ಕೇಶ್ ಎಂದು ಟಾಂಗ್ ನೀಡಿದ್ದಾರೆ. ಸಿನಿಮಾ ಮಾಡೋಕೆ ದುಡ್ಡಿಲ್ಲ, ತಲೆ ಮೇಲೆ ಕೂದಲಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಡ್ರಗ್ಸ್ ದಂಧೆ ಇದೆ-ನಟಿ ಪೂಜಾಗಾಂಧಿ
ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ದಂಧೆ ಇದೆ ಎಂದು ನಟಿ ಪೂಜಾಗಾಂಧಿ ಒಪ್ಪಿಕೊಂಡಿದ್ದಾರೆ. ಆದರೆ ನನಗೆ ಈ ಅನುಭವ ಆಗಿಲ್ಲ ಸ್ಪಷ್ಟಪಡಿಸಿದ್ದಾರೆ.
ರಘು ದೀಕ್ಷಿತ್ ಡ್ರಗ್ಸ್ ತಗೊತಾರೆ-ಸಂಬರಗಿ
ಸಂಗೀತ ನಿರ್ದೇಶಕ, ಗಾಯಕ ರಘು ದೀಕ್ಷಿತ್ ಡ್ರಗ್ಸ್ ತಗೋತಾರೆ ಎಂದು ಪ್ರಶಾಂತ್ ಸಂಬರಗಿ ಗಂಭೀರ ಆರೋಪ ಮಾಡಿದ್ದಾರೆ.