ಹಾಸನ: ಯಡಿಯೂರಪ್ಪನವರು ನಡೆಸುತ್ತಿರುವ ಸರ್ಕಾರ ನೋಡಿದರೆ ನಾನು ಮನೆಯಲ್ಲಿ ಕೂರಲಾಗುತ್ತಿಲ್ಲ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, ಕೊರೊನಾ ಕಾಯಿಲೆ ಕತೆ ಮುಗಿದ ನಂತರ ಇದಕ್ಕಿಂತ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ. ನಮ್ಮ ರೈತರು ಬೀದಿಗೆ ಬೀಳಬೇಕಾದ ಸಂದರ್ಭ ಎದುರಾಗಬೇಕಾಗುತ್ತದೆ. ಆದ್ದರಿಂದ ಈಗಿನಿಂದಲೇ ಸರ್ಕಾರ ಸರಿಯಾದ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಪ್ರಧಾನಿಯವರಿಗೂ ನಾನು ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.
ಇನ್ನು ಪ್ರಧಾನಿಯವರೂ ನಿಮ್ಮ ಅನುಭವ ತಿಳಿಸುವಂತೆ ಕೋರಿದ್ದರು. ಈ ಕಠಿಣ ಸಂದರ್ಭ ರಾಜಕೀಯ ಮಾಡಲು ಸಾಧ್ಯವಿಲ್ಲ. ಯಡಿಯೂರಪ್ಪನವರು ನಡೆಸುತ್ತಿರುವ ಸರ್ಕಾರ ನೋಡಿದರೆ ನಾನು ಮನೆಯಲ್ಲಿ ಕೂರಲಾಗುತ್ತಿಲ್ಲ. ಪ್ರಧಾನಿಗೆ ನಾನು ಬರೆದ ಪತ್ರದಲ್ಲಿ ಅನೇಕ ವಿಚಾರ ಪ್ರಸ್ತಾಪಿಸಿದ್ದೇನೆ. ಕೆಲ ತಾಲೂಕಿನಲ್ಲಿ ಬೆಳೆದ ಬೆಳೆ ಹಾಳಾಗಿರುವ ಬಗ್ಗೆಯೂ ಗಮನ ಸೆಳೆದಿದ್ದೆ. ಅಂತರರಾಜ್ಯ ವಹಿವಾಟಿಗೆ ಅವಕಾಶ ನೀಡಿ ಎಂದು ಮನವಿ ಮಾಡಿದ್ದೆ. ನಮ್ಮಲ್ಲಿನ ಬೇಡಿಕೆ ಬಗ್ಗೆ ಸರ್ಕಾರ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.








