ಸದ್ಯದಲ್ಲೇ ಪ್ರತ್ಯೇಕ ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮ ಸ್ಥಾಪಿಸುವ ಸಂಬಂಧ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ಶಾಸಕ ಯಶವಂತರಾಯ ಗೌಡ ವಿಠ್ಠಲಗೌಡ ಪಾಟೀಲ ಅವರ ಪ್ರಶ್ನೆಗೆ ಪಕ್ಷಬೇಧ ಮರೆತು ಹಲವು ಶಾಸಕರು ನಿಗಮ ಸ್ಥಾಪನೆ ಬಗ್ಗೆ ಒತ್ತಾಯಿಸಿದರು. ಇದಕ್ಕೆ ಉತ್ತರ ನೀಡಿದ ಶ್ರೀರಾಮುಲು, ವೀರಶೈವ ಲಿಂಗಾಯಿತ ಅಭಿವೃದ್ದಿ ನಿಗಮ ಸ್ಥಾಪಿಸುವ ಬಗ್ಗೆ ಸಿಎಂ ಆಸಕ್ತಿ ಹೊಂದಿದ್ದಾರೆ. ಪ್ರಸಕ್ತ ಅಧಿವೇಶನ ಮುಗಿಯುವುದರೊಳಗೆ ಸಂಬಂಧಪಟ್ಟವರೊಂದಿಗೆ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ದಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಪ್ರವರ್ಗ 1 ಮತ್ತು 2ಎಗೆ ಶೇ.70ರಷ್ಟು , ಪ್ರವರ್ಗ 3ಎ ಮತ್ತು 3ಬಿಗೆ ಶೇ.30ರಷ್ಟು ಮೀಸಲಾತಿ ಸೌಲಭ್ಯ ಒದಗಿಸಲಾಗುತ್ತಿದೆ. 2019-20ನೇ ಸಾಲಿನಲ್ಲಿ ಜನವರಿ ಅಂತ್ಯಕ್ಕೆ 2727 ವೀರಶೈವ ಲಿಂಗಾಯಿತ ಜನಾಂಗದವರಿಗೆ 16.80 ಕೋಟಿ ಸಾಲ ಮತ್ತು ಸಹಾಯಧನ ಒದಗಿಸಲಾಗಿದೆ ಎಂದರು.
ಇನ್ನು ಇದಕ್ಕೂ ಮುನ್ನ ಜೆಡಿಎಸ್ ಶಾಸಕ ಅನ್ನದಾನಿ ಮಾತನಾಡಿ, ಹಿಂದುಳಿದ ವರ್ಗದಲ್ಲಿ ಸಾವಿರಾರು ಜಾತಿಗಳು ಬರುವುದರಿಂದ ಒಂದು ಸಾವಿರ ಕೋಟಿ ರೂ. ಒದಗಿಸಬೇಕು ಎಂದರು. ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ಈಶ್ವರ್ ಖಂಡ್ರೆ, ಲಕ್ಷ್ಮಿ ಹೆಬ್ಬಾಳ್ಕರ್, ವೆಂಕಟರಾವ್ ನಾಡಗೌಡ, ಮಾಡಾಳು ವಿರೂಪಾಕ್ಷಪ್ಪ ಮತ್ತಿತರ ಶಾಸಕರು ವೀರಶೈವ ಲಿಂಗಾಯಿತ ಅಭಿವೃದ್ದಿ ನಿಗಮವನ್ನು ಸ್ಥಾಪಿಸಬೇಕೆಂಬ ಒತ್ತಾಯ ಮಾಡಿದರು.








