ಪಾಟ್ನಾ : ಇಡೀ ಜಗತ್ತು ಕೊರೊನಾ ವಿರುದ್ಧ ಹೋರಾಡುತ್ತಿದೆ. ದೇಶದಲ್ಲೂ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದೆ. ದೇಶದ ಜನರು ಕೊರೊನಾಗೆ ಕೊನೆ ಯಾವಾಗ ಎಂದು ಕಾಯುತ್ತಿದ್ದಾರೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಬಿಹಾರದಲ್ಲಿ ದುರಂತ ಘಟನೆಯೊಂದು ನಡೆದಿದೆ. ಕೊರೊನಾ ಐಸೋಲೇಶನ್ ವಾರ್ಡ್ ನಲ್ಲಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ ಎಂಬ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಕೊರೊನಾ ರೋಗದ ಲಕ್ಷಣಗಳನ್ನು ಹೊಂದಿದ್ದ ಶಂಕಿತೆಯನ್ನು ಆಸ್ಪತ್ರೆಯ ಐಸೋಲೇಶನ್ ವಾರ್ಡ್ ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ ಎಂದು ಹೇಳಲಾಗುತ್ತಿದೆ. ದುರಂತ ಅಂದ್ರೆ ಆ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.
25 ವರ್ಷದ ಮಹಿಳೆ ಪಂಜಾಬ್‌ನ ಲೂಧಿಯಾನದಿಂದ ತನ್ನ ಪತಿಯೊಂದಿಗೆ ಮಾರ್ಚ್ 25ರಂದು ಬಿಹಾರ್‌ದ ಗಯಾ ಜಿಲ್ಲೆಗೆ ಬಂದಿದ್ದರು. ಆಕೆಗೆ 2 ತಿಂಗಳ ಹಿಂದೆಯಷ್ಟೇ ಗರ್ಭಪಾತವಾಗಿತ್ತು. ನಂತರ ಅತಿಯಾದ ರಕ್ತಸ್ರಾವವಾಗುತ್ತಿದ್ದ ಕಾರಣ ಆಕೆಯನ್ನು ಮಾರ್ಚ್ 27 ರಂದು ಅನುಗ್ರಹ ನೈರೆಣ ಮಗಧ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ದಾಖಲಿಸಲಾಯಿತು. ತುರ್ತು ನಿಗಾ ಘಟಕದಲ್ಲಿ ಆಕೆಯನ್ನು ಇರಿಸಿ ಚಿಕಿತ್ಸೆ ನೀಡುತ್ತಿದ್ದರು. ಬಳಿಕ ಏಪ್ರಿಲ್ 1 ರಂದು ಆಕೆಗೆ ಕೊರೊನಾ ಶಂಕೆ ಇದೆ ಎಂದು ಹೇಳಿ ಐಸೋಲೇಶನ್ ವಾರ್ಡ್ ಗೆ ಸ್ಥಳಾಂತರ ಮಾಡಲಾಯಿತು.
ಐಸೋಲೇಶನ್ ವಾರ್ಡ್ ನಲ್ಲಿ ತಡರಾತ್ರಿ ತಪಾಸಣೆಗೆ ಬರುತ್ತಿದ್ದ ವೈದ್ಯರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ್ದಾರೆ ಎಂದು ಮಹಿಳೆಯ ಅತ್ತೆ ಆರೋಪಿಸಿದ್ದಾಳೆ.
ಆ ಮಹಿಳೆಯ ಅತ್ತೆ ಹೇಳಿರುವ ಪ್ರಕಾರ, ಆಸ್ಪತ್ರೆಯಿಂದ ಮನೆಗೆ ಬಂದ ಎರಡು ದಿನಗಳ ಬಳಿಕ ತನ್ನ ಸೊಸೆ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಳು. ಅದಕ್ಕೆ ಆಕೆ ಮೇಲೆ ವೈದ್ಯರು ನಡೆಸಿರುವ ಲೈಂಗಿಕ ದೌರ್ಜನ್ಯವೇ ಕಾರಣ ಎಂದು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸರು, ಮಹಿಳೆ ನೀಡಿದ ಗುರುತಿನ ಆಧಾರದಲ್ಲಿ ವೈದ್ಯರನ್ನು ಗುರುತಿಸಲು ಸಾಧ್ಯವೇ ಎಂದು ಪರೀಕ್ಷಿಸಿದ್ದಾರೆ. ಆದರೆ ಅತ್ತೆಯಿಂದ ಸಾಧ್ಯವಾಗಲಿಲ್ಲ ಎಂದು ತಿಳಿದಿದೆ.








