ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಅಧಿವೇಶನ ನಡೆಸಬೇಕೋ ಬೇಡವೋ ಎಂಬ ಕುರಿತು ಸಂಸದರು ಭಿನ್ನ ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಆಡಳಿತ ಪಕ್ಷದ ಸದಸ್ಯರು ಅಧಿವೇಶನ ಮುಂದುವರೆಯಲಿ ಎಂದರೆ, ಪ್ರತಿಪಕ್ಷಗಳ ಸದಸ್ಯರು ನಮಗೂ ಕೊರೊನಾ ಭೀತಿಯಿದ್ದು ಅಧಿವೇಶನ ಮೊಟಕುಗೊಳಿಸಿ ಎಂದು ದಂಬಾಲು ಬಿದ್ದಿದ್ದಾರೆ.
ಈ ಕುರಿತು ಕಾಂಗ್ರೆಸ್ ಸಂಸದ ಶಶಿ ತರೂರ್ ಟ್ವೀಟ್ ಮಾಡಿದ್ದು, ಸಂಸದರು ಒಬ್ಬರ ಪಕ್ಕ ಒಬ್ಬರು ಕೂರುವುದರಿಂದ ಕೊರೊನಾ ಸೋಂಕು ತಗುಲುವ ಭೀತಿ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಅಧಿವೇಶನವನ್ನು ಮೊಟಕುಗೊಳಿಸುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.
ಕಾಂಗ್ರೆಸ್ ನಾಯಕ ಶಶಿ ತರೂರ್ ಟ್ವೀಟ್ ಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಿರುಗೇಟು ನೀಡಿದ್ದಾರೆ. ದೇಶದ ವೈದ್ಯರು ಕೊರೊನಾ ಹೋಗಲಾಡಿಲು ಅತ್ಯಂತ ಧೈರ್ಯವಾಗಿ ಕೆಲಸ ಮಾಡುತ್ತಿದ್ದಾರೆ. ಸೈನಿಕರು ಅತ್ಯಂತ ಧೈರ್ಯದಿಂದ ಗಡಿ ಕಾಯುತ್ತಿದ್ದಾರೆ. ಅಂತದ್ದರಲ್ಲಿ ಸಂಸದರು ಕೆಲಸ ಮಾಡಿದರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.