ಮೈಸೂರು : ನನಗೆ ವಿಧಾನಪರಿಷತ್ ಟಿಕೆಟ್ ತಪ್ಪೋದ್ದಕ್ಕೆ ಸಿದ್ದರಾಮಯ್ಯ, ಕುಮಾರಸ್ವಾಮಿ ಕಾರಣ ಎಂಬ ಹೆಚ್. ವಿಶ್ವನಾಥ್ ಆರೋಪಕ್ಕೆ ಸಿದ್ದರಾಮಯ್ಯ ನಾನೇನು ಬಿಜೆಪಿ ಹೈಕಮಾಂಡಾ ಎಂದು ವ್ಯಂಗ್ಯವಾಡಿದ್ದರು. ಇದೀಗ ಸಿದ್ದರಾಮಯ್ಯರ ಈ ಹೇಳಿಕೆಗೆ ಮಾಜಿ ಸಚಿವ ಹೆಚ್. ವಿಶ್ವನಾಥ್ ಪ್ರತಿಕ್ರಿಯಿಸಿ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ನನಗೆ ಪರಿಷತ್ ಟಿಕೆಟ್ ತಪ್ಪಿಸುವಲ್ಲಿ ಕೆಲ ಕಾಣದ ಕೈಗಳು ಕೆಲಸ ಮಾಡಿವೆ. ವಿಶ್ವನಾಥ್ ರಾಜಕಾರಣದಲ್ಲಿ ಇರಬಾರದು ಎಂಬ ಮನಸ್ಥಿತಿಯವರು ಹೀಗೆ ಮಾಡಿದ್ದಾರೆ. ಸಿದ್ದರಾಮಯ್ಯ ಬಿಜೆಪಿ ಹೈಕಮಾಂಡ್ ಅಲ್ಲ, ನಮ್ಮ ಹೈಕಮಾಂಡ್ ಆಗಲು ಸಾಧ್ಯವೂ ಇಲ್ಲ. ಆದರೆ, ಅವರದ್ದು ಕುತಂತ್ರ ರಾಜಕಾರಣ ಎಂದು ಕಿಡಿಕಾರಿದ್ದಾರೆ.
ಇನ್ನು ಟಿಕೆಟ್ ತಪ್ಪಿದ ಕಾರಣ ವಿಶ್ವನಾಥ್ ಏನೇನೋ ಮಾತನ್ನಾಡುತ್ತಾರೆ ಎಂಬ ಹೆಚ್‌ಡಿಕೆ ಹೇಳಿಕೆಗೆ ತಿರುಗೇಟು ನೀಡಿದ ವಿಶ್ವನಾಥ್, ನಾನು ಏನು ಮಾತನಾಡುತ್ತಿದ್ದೇನೆ ಎಂಬೋದು ನನಗೆ ಚೆನ್ನಾಗಿ ಅರ್ಥವಾಗುತ್ತಿದೆ. ಆದ್ರೆ ಅಧಿಕಾರ ಕಳೆದುಕೊಂಡ ಹೆಚ್ ಡಿ ಕುಮಾರಸ್ವಾಮಿ, ಹುಚ್ಚುಚ್ಚಾಗಿ ಏನೇನೋ ಮಾತನಾಡುತ್ತಿದ್ದಾರೆ. ಅಧಿಕಾರ ಇಲ್ಲದ ಕಾರಣ ಕುಮಾರಸ್ವಾಮಿ ಅವರನ್ನ ನೋಡೋಕೆ ಆಗುತ್ತಿಲ್ಲ ಎಂದು ಕುಟುಕಿದ್ದಾರೆ.
ಇನ್ನು ಎಂಎಲ್ ಸಿ ಟಿಕೆಟ್ ಕೈ ತಪ್ಪಿದ ವಿಚಾರಕ್ಕೆ ಮಾತನಾಡಿದ ಅವರು, ಟಿಕೆಟ್ ತಪ್ಪಿದ ವಿಚಾರವಾಗಿ ಇಂದು ಮುಂಜಾನೆ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೆ. ಅವರೂ ಏನೋ ವ್ಯಾತ್ಯಾಸ ಆಗಿದೆ. ಅದನ್ನ ಸರಿಪಡಿಸೋಣ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಒಳ್ಳೆಯ ಅವಕಾಶ ಸಿಗಬಹುದು ಎಂದು ವಿಶ್ವನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.