ಬೆಂಗಳೂರು: ಒಂದು ಕಡೆ ಕೊರೊನಾ ವ್ಯಾಪಕವಾಗಿ ಹಬ್ಬುತ್ತಿದ್ದು, ನಿಯಂತ್ರಣಕ್ಕೆ ಯಡಿಯೂರಪ್ಪ ಸರ್ಕಾರ ಪರದಾಟ ನಡೆಸುತ್ತಿದೆ. ಇದೇ ವೇಳೆ, ಕೋವಿಡ್ ಸಾಮಗ್ರಿ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದರು. ಆದರೆ ತಾವು ಆರೋಪ ಮಾಡುವುದನ್ನು ಬಿಟ್ಟು ಸರ್ಕಾರಕ್ಕೆ ಸಹಕಾರ ನೀಡಬೇಕೆಂದು ಮಾಜಿ ಸಿಎಂ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.
ಹೆಚ್.ಡಿ ಕುಮಾರಸ್ವಾಮಿ ಅವರ ಸಲಹೆಗೆ ತೀಕ್ಷ್ಣವಾಗಿಯೇ ತಿರುಗೇಟು ನೀಡಿರುವ ಸಿದ್ದರಾಮಯ್ಯ, ಒಂದು ಕಡೆ ಆಶಾ ಕಾರ್ಯಕರ್ತೆಯರ ಮುಷ್ಕರ, ಪೌರ ಕಾರ್ಮಿಕರಿಂದ ಮುಷ್ಕರಕ್ಕೆ ಸಿದ್ಧತೆ, ಕೆಎಸ್‍ಆರ್‍ಟಿಸಿ ನೌಕರರಿಗೆ ಸಂಬಳ ರಹಿತ ಕಡ್ಡಾಯ ರಜೆ, ಆಸ್ಪತ್ರೆಗಳಲ್ಲಿ ವೈದ್ಯರು, ನರ್ಸ್‍ಗಳ ಕೊರತೆ..ಇದು ನಮ್ಮ ರಾಜ್ಯ ಸರ್ಕಾರದ ವೈಖರಿಯಾಗಿದೆ ಎಂದು ಟೀಕಿಸಿದ್ದಾರೆ.

ಮುಂದುವರೆದು, ನಾವು ಸರ್ಕಾರದ ಲೋಪಗಳನ್ನು ಎತ್ತಿ ತೋರಿಸದೆ ಸಹಕರಿಸಬೇಕಂತೆ. ಬುದ್ದಿ ಹೇಳುವವರು ಈ ಸುದ್ದಿಗಳನ್ನು ಒಮ್ಮೆ ಓದಲಿ ಎಂದು ಸಿದ್ದರಾಮಯ್ಯ ಅವರು ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ. ಇದಕ್ಕೆ ಪತ್ರಿಕೆಗಳಲ್ಲಿ ಬಂದ ವರದಿಯ ತುಣುಕುಗಳನ್ನು ಸಿದ್ದರಾಮಯ್ಯ ಟ್ವಿಟರ್ ನಲ್ಲಿ ಟ್ಯಾಗ್ ಮಾಡಿದ್ದಾರೆ.








