ಮಾಸ್ಕ್ ದಂಡದ ಮೊತ್ತ
ನಗರ ಪ್ರದೇಶಗಳು
ಹಿಂದಿನ ದಂಡದ ಮೊತ್ತ: 1000ರೂ. ಹೊಸ ದಂಡದ ಮೊತ್ತ: 250ರೂ.
ಗ್ರಾಮೀಣ ಪ್ರದೇಶಗಳು
ಹಿಂದಿನ ದಂಡದ ಮೊತ್ತ: 500ರೂ. ಹೊಸ ದಂಡದ ಮೊತ್ತ: 100ರೂ.
ಬೆಂಗಳೂರು: ಕೊರೊನಾ ಹರಡುವುದನ್ನು ತಡೆಗಟ್ಟಲು ಮುಂದಾದ ರಾಜ್ಯ ಸರ್ಕಾರ ಮಾಸ್ಕ್ ಹಾಕದವರಿಗೆ 1000ರೂ. ದಂಡ ಹಾಕಲು ಮುಂದಾಗಿತ್ತು. ಆದರೆ, ದುಬಾರಿ ದಂಡದ ವಿರುದ್ಧ ಮಾಧ್ಯಮಗಳಲ್ಲಿ ಅಭಿಯಾನ ಶುರುವಾಗುತ್ತಿದ್ದಂತೆ ಸರ್ಕಾರದ ವಿರುದ್ಧ ಜನಾಕ್ರೋಶ ವ್ಯಕ್ತವಾಗಿತ್ತು.
ಜನಾಕ್ರೋಶ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ನಗರ ಪ್ರದೇಶದಲ್ಲಿ ಮಾಸ್ಕ್ ದಂಡದ ಪ್ರಮಾಣವನ್ನು 1000ರೂ.ನಿಂದ 250ಕ್ಕೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ 500 ರೂ. ಇದ್ದ ದಂಡದ ಮೊತ್ತವನ್ನು 100ರೂ.ಗೆ ಇಳಿಸಿ ಆದೇಶ ಹೊರಡಿಸಿದ್ದಾರೆ.
ಲಾಕ್‍ಡೌನ್ ಹಾಗೂ ಕೊರೊನಾ ಸಂಕಷ್ಟದ ಕಾಲದಲ್ಲಿ ಕೆಲಸವಿಲ್ಲದೆ ಲಕ್ಷಾಂತರ ಜನರು ಬೀದಿಗೆ ಬಂದಿದ್ದಾರೆ. ವ್ಯಾಪಾರ ವಹಿವಾಟು ಇಲ್ಲದೆ ಸಾಲ ಕಟ್ಟಲಾಗದೆ ವ್ಯಾಪಾರಸ್ಥರು ಹೈರಾಣಾಗಿ ಹೋಗಿದ್ದಾರೆ. ದಿನಗೂಲಿ ಮಾಡಿಕೊಂಡು ಬದುಕು ಸಾಗಿಸುತ್ತಿರುವವರು, ಆಟೋ ಚಾಲಕರು ಮಾಸ್ಕ್ ಹಾಕದ ಕಾರಣಕ್ಕೆ 1000ರೂ. ದಂಡ ಹೇಗೆ ಕಟ್ಟಬೇಕು. ಮೊದಲೇ ಕೆಲಸ ಇಲ್ಲ, ಜನರ ಕೊಳ್ಳುವ ಶಕ್ತಿಯೂ ಕುಸಿದಿದೆ. ಇಂತಹ ಸಂದರ್ಭದಲ್ಲಿ 1000ರೂ. ದಂಡ ಕಟ್ಟುವುದು ಹೇಗೆ ಎಂದು ಮಾಧ್ಯಮಗಳಲ್ಲಿ ರಾಜ್ಯ ಸರ್ಕಾರದ ಕಣ್ಣು ತೆರೆಸುವ ಪ್ರಯತ್ನ ನಡೆದಿತ್ತು.
ಮಾಧ್ಯಮಗಳ ಮೂಲಕ ಸರ್ಕಾರದ ವಿರುದ್ಧ ಜನರ ಆಕ್ರೋಶದ ಕಟ್ಟೆಯೊಡೆಯುವ ಸುಳಿವು ದೊರೆಯುತ್ತಿದ್ದಂತೆ ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಹಿಂದಿನ ಆದೇಶ ತಡೆದು ದಂಡದ ಮೊತ್ತ ಕಡಿಮೆ ಮಾಡಿ ಆದೇಶ ಹೊರಡಿಸಿದ್ದಾರೆ.
ಆರೋಗ್ಯ ಸಚಿವ ಶ್ರೀರಾಮುಲು ಕೂಡ ದಂಡದ ಮೊತ್ತ 1000ರೂ.ಗಳನ್ನು ಕಡಿಮೆ ಮಾಡಲ್ಲ, ಜನರಲ್ಲಿ ಜಾಗೃತಿ ಮೂಡಿಸಲು ಈ ದಂಡವನ್ನು 200 ರೂ.ನಿಂದ 1000ರೂ.ಗೆ ಹೆಚ್ಚಿಸಲಾಗಿದೆ ಎಂದು ಸಮರ್ಥನೆ ಮಾಡಿಕೊಂಡಿದ್ದರು. ಸಚಿವರು ಮಾಡಲಾಗದ ಕೆಲಸವನ್ನು ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ ಮಾಡಿ ಜನರ ಆಕ್ರೋಶ ತಣ್ಣಗಾಗುವಂತೆ ಮಾಡಿದ್ದಾರೆ.
ಇನ್ನು ಮುಂದೆ ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಮಾಸ್ಕ್ ಹಾಕದವರಿಗೆ 1000ರೂ.ನಿಂದ 250 ಹಾಗೂ ಗ್ರಾಮೀಣ ಪ್ರದೇಶದಲ್ಲಿ 500 ರೂ. ಇದ್ದ ದಂಡದ ಪ್ರಮಾಣವನ್ನು 100ರೂ.ಗೆ ಇಳಿಸಲಾಗಿದೆ.
`ಜೀವ ಮತ್ತು ಜೀವನ’ ಎರಡನ್ನೂ ಸರಿದೂಗಿಸಿಕೊಂಡು ಹೋಗಲು ಸರ್ಕಾರವು ಸರ್ವಪ್ರಯತ್ನಗಳನ್ನು ಮಾಡುತ್ತಿದ್ದು, ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಮಾಸ್ಕ್, ಸ್ಯಾನಿಟೈಸರ್ ಬಳಕೆ ಹಾಗೂ ಸಾಮಾಜಿ ಅಂತರವನ್ನು ಕಾಪಾಡಿಕೊಳ್ಳುವುದರ ಮೂಲಕ ಸರ್ಕಾರದೊಂದಿಗೆ ಸಹಕಾರ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ.