ಚೆನ್ನೈ : ತಮಿಳುನಾಡಿನ ಕಲಕುರಿಚಿ ಕ್ಷೇತ್ರದ ಶಾಸಕ ಪ್ರೀತಿಸಿ ಮದುವೆಯಾಗಿದ್ದು, ಇದೀಗ ಟಾಕ್ ಆಪ್ ದಿ ಟೌನ್ ಆಗಿದೆ. 35 ವರ್ಷದ ಎಐಎಡಿಎಂಕೆ ಶಾಸಕ ಪ್ರಭು, 19 ವರ್ಷದ ಕಾಲೇಜು ಯುವತಿಯ ಕೈ ಹಿಡಿದಿರುವುದು ವಿವಾದಕ್ಕೆ ಕಾರಣವಾಗಿದೆ.

ಅಕ್ಟೋಬರ್ 5 ರಂದು ಪ್ರಭು ಅವರು 19 ವರ್ಷದ ಸೌಂದರ್ಯ ಎಂಬ ಪಿಯುಸಿ ವಿದ್ಯಾರ್ಥಿನಿಯೊಂದಿಗೆ ಮದುವೆಯಾಗಿದ್ದಾರೆ. ಇದೊಂದು ಅಂತರ್ಜಾತಿ ವಿವಾಹವಾಗಿದ್ದು, ವಧುವಿನ ತಂದೆ ಎಸ್.ಸ್ವಾಮಿನಾಥನ್ ಮದುವೆ ದಿನವೇ ವಧು-ವರರ ಮುಂದೆ ಬಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಈ ವಿವಾಹ ಭಾರೀ ವಿವಾದ ಸೃಷ್ಟಿಸಿದೆ.
ತಮ್ಮ ಮಗಳನ್ನು ಬಲವಂತವಾಗಿ ಅಪಹರಿಸಿಕೊಂಡು ಹೋಗಿ ಮದುವೆ ಮಾಡಿಕೊಳ್ಳಲಾಗಿದೆ. ಮಗಳನ್ನು ಪುಸಲಾಯಿಸಿ ಬಲೆಗೆ ಬೀಳಿಸಿಕೊಂಡು ಪ್ರಭು ಮದುವೆಯಾಗಿದ್ದಾನೆ ಎಂದು ಯುವತಿಯ ತಂದೆ ಆರೋಪಿಸಿದ್ದಾರೆ. ಆದರೆ, ಯುವತಿ ಕುಟುಂಬಕ್ಕೆ ಪರಿಚಯದವರೇ ಆಗಿದ್ದ ಶಾಸಕ ಪ್ರಭು ಹಾಗೂ ಸೌಂದರ್ಯ ಪ್ರೀತಿಸಿ ಮದುವೆಯಾಗಿದ್ದಾರೆ ಎನ್ನಲಾಗಿದೆ.








